ದಾವಣಗೆರೆ: ಉತ್ತರ ಕರ್ನಾಟಕದಲ್ಲಿ ಸಂಭವಿಸಿದ ಭೀಕರ ನೆರೆಯಿಂದ ಲಕ್ಷಾಂತರ ಮಂದಿ ನಿರ್ಗತಿಕರಾಗಿದ್ದಾರೆ. ಎಲ್ಲೆಡೆಯಿಂದಲೂ ನಿರಾಶ್ರಿತರಿಗೆ ಪರಿಹಾರ ಹರಿದು ಬರುತ್ತಿದೆ. ಜಿಲ್ಲೆಯಲ್ಲಿಯೂ ಸಾಕಷ್ಟು ಜನರು ಸಂತ್ರಸ್ತರ ಕಷ್ಟಕ್ಕೆ ಮರುಗುತ್ತಿದ್ದಾರೆ. ಪ್ರತಿ ಗ್ರಾಮದಿಂದಲೂ ವಸ್ತುಗಳ ಸಂಗ್ರಹ ಕಾರ್ಯ ನಡೆಯುತ್ತಿದೆ. ಅದರ ಬೆನ್ನಲ್ಲೇ ಜಿಲ್ಲೆಯ ಹೊನ್ನಾಳಿ ಶಾಸಕ ಎಂ. ಪಿ. ರೇಣುಕಾಚಾರ್ಯ ಸ್ವತಃ ಅವರೇ ಟ್ರ್ಯಾಕ್ಟರ್ ಚಲಾಯಿಸುವ ಮೂಲಕ ಪರಿಹಾರ ವಸ್ತುಗಳನ್ನು ಸಂಗ್ರಹಿಸಿದರು.
ಇದೇ ಸಂದರ್ಭ ಮಾತನಾಡಿದ ಅವರು, ಎಲ್ಲರೂ ಪಕ್ಷತೀತಾವಾಗಿ ನಿರಾಶ್ರಿತರಿಗೆ ಪರಿಹಾರ ನೀಡಬೇಕು, ಈಗಾಗಲೇ ಜಿಲ್ಲೆಯ ಎರಡೂ ತಾಲೂಕುಗಳಲ್ಲಿ ನೂರಾರು ಜನರು ಬಟ್ಟೆ, ದಿನಸಿ ಮತ್ತು ಧನ ಸಹಾಯ ಮಾಡುತ್ತಿದ್ದಾರೆ. ಸರ್ಕಾರದ ವತಿಯಿಂದಲೂ ಸಂತ್ರಸ್ತರಿಗೆ ಪುರ್ನವಸತಿ ಕೇಂದ್ರಗಳನ್ನು ನಿರ್ಮಿಸಲಾಗಿದೆ ಇನ್ನೂ ಹೆಚ್ಚಿನ ಸಹಾಯನ್ನು ಯಾವುದೇ ಅನ್ಯತಾ ಬಾವಿಸದೇ, ಮುಂದಿನ ದಿನಗಳಲ್ಲಿ ದಾನಿಗಳು ಮುಂದೆ ಬಂದು ಧನ ಸಹಾಯ ಮಾಡಬೇಕು ಎಂದು ವಿನಂತಿಸಿಕೊಂಡರು. ಹಾಗೂ ಇದುವರೆಗೂ ಸಂಗ್ರಹವಾಗಿರುವ ಹಣವನ್ನು ಸಿಎಂ ಪರಿಹಾರ ನಿಧಿಗೆ ಕಳುಹಿಸಿಕೊಡುವುದಾಗಿ ತಿಳಿಸಿದರು.
ಜಿಲ್ಲೆಯ ಹೊನ್ನಾಳಿ ತಾಲೂಕಿನ ಅರಕೆರೆ ಗ್ರಾಮದ ಬಿಜೆಪಿ ಘಟಕದ ಪದಾಧಿಕಾರಿಗಳು ಮತ್ತು ಗ್ರಾಮಸ್ಥರು ಪರಿಹಾರ ನಿಧಿ ಸಂಗ್ರಹಿಸುವ ಜೊತೆಗೆ ಅಕ್ಕಿ, ಬಟ್ಟೆ ಸೇರಿದಂತೆ ಇನ್ನಿತರೆ ಅಗತ್ಯ ವಸ್ತುಗಳನ್ನು ಸಂಗ್ರಹಿಸಿದರು ಹಾಗೂ ಅರಕೆರೆ ಗ್ರಾಮದಿಂದ ನೆರೆ ಸಂತ್ರಸ್ತರಿಗೆ 40 ಕ್ವಿಂಟಾಲ್ ಅಕ್ಕಿ, 200 ಸೀರೆ ಮತ್ತು 150 ರಗ್ಗುಗಳು ಹಾಗೂ ಆಹಾರ ಸಾಮಗ್ರಿಗಳನ್ನು ನೀಡಲಾಯಿತು. ಅರಕೆರೆ ಮಾತ್ರವಲ್ಲದೆ ಹೊನ್ನಾಳಿ ತಾಲೂಕಿನ ಬೆನಕನಹಳ್ಳಿ ಸೇರಿ ಇತರೆ ಗ್ರಾಮಗಳು ಹಾಗೂ ನ್ಯಾಮತಿ ತಾಲೂಕಿನ ಜನರು ಸಹ ನೆರೆ ಸಂತ್ರಸ್ತರಿಗಾಗಿ ಪರಿಹಾರ ಸಾಮಗ್ರಿಗಳನ್ನು ಸಂಗ್ರಹಿಸಿ ನೀಡಿದ್ದಾರೆ.