ದಾವಣಗೆರೆ: ಶಾಸಕ ಯತ್ನಾಳ್ ಸಿಡಿ ಹೇಳಿಕೆ ವಿಚಾರವಾಗಿ ಸಿಎಂ ಬಿಎಸ್ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದು, ಯಾವ ಸಿಡಿಗೂ ಹೆದರಲ್ಲ ಎಂದು ಖಡಕ್ಕಾಗಿ ಹೇಳಿದ್ದಾರೆ.
ಸಿಎಂ ಬಿಎಸ್ವೈ ಅವರನ್ನು ‘ಸಿಡಿ’ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುವ ಮೂಲಕ ಮೂವರು ಸಚಿವರಾಗುತ್ತಿದ್ದಾರೆ ಎನ್ನುವ ಮೂಲಕ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೊಸ ಬಾಂಬ್ ಸಿಡಿಸಿದ್ದರು. ಅದಕ್ಕೆ ಪ್ರತಿಕ್ರಿಯಿಸಿರುವ ಸಿಎಂ ಯಾವ ಸಿಡಿಗೂ ಹೆದರಲ್ಲ, ಏನೂ ಮಾಡಲಾಗದು ಎಂದಿದ್ದಾರೆ. ಅದೇನೇ ಇದ್ದರೂ ಕೇಂದ್ರದ ನಾಯಕರಿಗೆ ದೂರು ನೀಡಲಿ ಎಂದಿದ್ದಾರೆ.
ಇನ್ನೂ ಯಶಸ್ವಿಯಾಗಿ ಮಂತ್ರಿ ಮಂಡಲ ವಿಸ್ತರಣೆ ಮಾಡಿದ್ದೇವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೇಂದ್ರದ ನಾಯಕರ ಅಪೇಕ್ಷೆಯಂತೆ ಒಂದು ಸಚಿವ ಸ್ಥಾನ ಖಾಲಿ ಇಟ್ಟುಕೊಂಡಿದ್ದೇವೆ. 10-12 ಜನರನ್ನು ಮಂತ್ರಿ ಮಾಡಿಲ್ಲವೆಂದು ಕೆಲವರು ಆರೋಪ ಮಾಡುತ್ತಿದ್ದಾರೆ. ನನ್ನ ಇತಿಮಿತಿಯಲ್ಲಿ ಏನು ಮಾಡಲು ಸಾಧ್ಯ ಅವನ್ನು ಮಾಡಿದ್ದೇನೆಂದು ತಿಳಿಸಿದರು.
ತಮ್ಮನ್ನು ಮಂತ್ರಿ ಮಾಡಿಲ್ಲವೆಂದು ಕೆಲವರು ಆರೋಪಿಸುತ್ತಿದ್ದು, ಅದೇನೇ ಆರೋಪ ಇದ್ರೂ ಕೂಡ ಕೇಂದ್ರದ ನಾಯಕರಿಗೆ ದೂರು ನೀಡಲು ಯಾರು ಅಡ್ಡಿಪಡಿಸುವುದಿಲ್ಲ. ಇಲ್ಲಿ ಹೇಳಿಕೆ ಕೊಡುವುದರ ಮೂಲಕ ಗೊಂದಲ ಉಂಟು ಮಾಡಿ ವಾತಾವರಣ ಕೆಡೆಸಿದರೆ ಶಿಸ್ತಿಗೆ ಧಕ್ಕೆ ತರುವಂತಾಗುತ್ತದೆ ಎಂದರು.
ಈ ಸುದ್ದಿಯನ್ನೂ ಓದಿ: ಬಿಎಸ್ವೈಗೆ 'ಸಿಡಿ' ಬ್ಲ್ಯಾಕ್ಮೇಲ್ ಆರೋಪ: ಯಡಿಯೂರಪ್ಪ ಯುಗ ಅಂತ್ಯ ಎಂದ ಯತ್ನಾಳ್!
ಕೇಂದ್ರದ ನಾಯಕರು ಹೇಳಿದಂತೆ ಎರಡೂವರೆ ವರ್ಷ ಆಡಳಿತ ನಡೆಯುತ್ತದೆ. ಅದನ್ನು ತಪ್ಪಿಸಲು ಸಾಧ್ಯವಿಲ್ಲ. ಕೇಂದ್ರ ನಾಯಕರ ಆಶೀರ್ವಾದ ಇರುವುದರಿಂದ ಉತ್ತಮ ಆಡಳಿತ ನಡೆಸುತ್ತೇನೆ. ಈ ತಿಂಗಳ ಕೊನೆಯಲ್ಲಿ ವಿಧಾನ ಮಂಡಲ ಅಧಿವೇಶನ ನಡೆಯುತ್ತದೆ, ಮಾರ್ಚ್ನಲ್ಲಿ ಬಜೆಟ್ ಅಧಿವೇಶನ ಮಾಡುತ್ತೇನೆ. ಹಣಕಾಸಿನ ಇತಿ ಮಿತಿಯಲ್ಲಿ ರೈತ ಪರ ಬಜೆಟ್ ಮಂಡನೆ ಮಾಡುತ್ತೇವೆ ಎಂದರು.