ದಾವಣಗೆರೆ: 30 ಕೋಟಿ ರೂ. ವೆಚ್ಚದ ತುಂಗಭದ್ರಾ ಆರತಿ ಯೋಜನೆಯ ಮಂಟಪಗಳಿಗೆ ಇಂದು ಸಿಎಂ ಬಸವರಾಜ ಬೊಮ್ಮಾಯಿ ಶಿಲಾನ್ಯಾಸ ಕಾರ್ಯ ನೆರವೇರಿಸಿದರು.
ದಾವಣಗೆರೆ ಜಿಲ್ಲೆಯ ಹರಿಹರ ನಗರದ ತುಂಗಭದ್ರಾ ನದಿ ತಟದಲ್ಲಿ ಸಿಎಂ ಬೊಮ್ಮಾಯಿ ಗಂಗಾ ಪೂಜೆ ನೆರವೇರಿಸಿದರು. ಕೇಸರಿ ವಸ್ತ್ರದೊಂದಿಗೆ ಪೂಜೆಗೆ ಆಗಮಿಸಿದ ಸಿಎಂ ಜೊತೆ ವಚನಾನಂದ ಶ್ರೀ, ಸಚಿವರಾದ ನಿರಾಣಿ, ಭೈರತಿ ಬಸವರಾಜ್, ಸಂಸದ ಸಿದ್ದೇಶ್ವರ್ ಉಪಸ್ಥಿತರಿದ್ದರು. ನದಿ ತೀರದಲ್ಲಿ ಸಿಎಂ ಸೇರಿದಂತೆ ವಚನಾನಂದ ಶ್ರೀ ಹಾಗೂ ಭೈರತಿ ಬಸವರಾಜ್, ಮುರುಗೇಶ್ ನಿರಾಣಿ ಕೆಲ ಕಾಲ ಧ್ಯಾನ ಮಾಡಿದರು.
ಪೂಜೆ ಬಳಿಕ ಮಾತನಾಡಿದ ಸಿಎಂ, ವಚನಾನಂದ ಸ್ವಾಮೀಜಿಗಳು ತುಂಗಾ ಆರತಿ ನಿರ್ಮಾಣ ಆಗಬೇಕೆಂದು ಪ್ರಸ್ತಾವನೆ ಸಲ್ಲಿಸಿದ್ದರು. ಅದರಂತೆ ತುಂಗಾಭದ್ರಾ ಆರತಿಗೆ ಸರ್ಕಾರ ಅಸ್ತು ಎಂದಿದೆ. ಉತ್ತರ ಭಾರತದ ಮಾದರಿಯಲ್ಲಿ ತುಂಗಾಭದ್ರಾ ಆರತಿಯಾಗುತ್ತದೆ. ಅದಕ್ಕೆ ಸರ್ಕಾರ 30 ಕೋಟಿ ರೂ ನೀಡುತ್ತಿದೆ. ಆ ಮೂಲಕ ಹರಿಹರ ಒಂದು ಪ್ರವಾಸಿ ತಾಣವಾಗಲಿದ್ದು, ಆಧ್ಯಾತ್ಮಿಕ ಕ್ಷೇತ್ರವಾಗುತ್ತದೆ ಎಂದರು.
ಬಜೆಟ್ ಗಾತ್ರದ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿ ಸಿಎಂ, ಹರಿಹರ ಕ್ಷೇತ್ರದ ಅಭಿವೃದ್ಧಿಗೂ ಹಣ ಬಿಡುಗಡೆ ಮಾಡುವೆ. ಕೆಲವೇ ದಿನಗಳಲ್ಲಿ ಬಜೆಟ್ ಗಾತ್ರ ಗೊತ್ತಾಗಲಿದೆ ಎಂದರು.
ಇದನ್ನೂ ಓದಿ: ಗಂಗಾರತಿಯಂತೆ ರಾಜ್ಯದಲ್ಲಿ ತುಂಗಾರತಿ: ಹರಿಹರದಲ್ಲಿ ಮರುಕಳಿಸಲಿದೆ ಗತವೈಭವ