ದಾವಣಗೆರೆ: ಕೌಟುಂಬಿಕ ಕಲಹ ಪ್ರಕರಣ ಸಂಬಂಧ ವಿಚಾರಣೆಗೆ ಎಂದು ಮಾಯಕೊಂಡ ಪೊಲೀಸ್ ಠಾಣೆಗೆ ಹಾಜರಾಗಿದ್ದ ವಿಠಲಾಪುರ ಗ್ರಾಮದ ಮರುಳಸಿದ್ದಪ್ಪ ಕಸ್ಟೋಡಿಯಲ್ ಡೆತ್‌ಗೆ ಸಂಬಂಧಿಸಿದಂತೆ ಮೂವರು ಪೊಲೀಸರ ವಿರುದ್ಧ ಸಿಐಡಿ ತಂಡ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದೆ.
ಕಳೆದ ಅಕ್ಟೋಬರ್ 6 ರಂದು ವಿಠಲಾಪುರದ ಮರುಳಸಿದ್ದಪ್ಪ ಅವರ ಮೃತದೇಹ ಮಾಯಕೊಂಡ ಬಸ್ ನಿಲ್ದಾಣದಲ್ಲಿ ಪತ್ತೆಯಾಗಿತ್ತು. ಮರುಳಸಿದ್ದಪ್ಪ ಸಾವಿನ ಕುರಿತು ಪೊಲೀಸರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆ ಪ್ರಕರಣವನ್ನು ಸಿಐಡಿ ಡಿಎಸ್ಪಿ ಗಿರೀಶ್ ತಂಡಕ್ಕೆ ವಹಿಸಲಾಗಿತ್ತು. ತನಿಖೆ ನಡೆಸಿದ ಸಿಐಡಿ ತಂಡ, ಅಂತಿಮವಾಗಿ ಪೊಲೀಸರ ವಿರುದ್ಧ ದಾವಣಗೆರೆ ಜಿಲ್ಲಾ ಸೆಷನ್ಸ್ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದೆ. ಮಾಯಕೊಂಡ ಠಾಣೆ ಸಬ್ ಇನ್ಸ್ಪೆಕ್ಟರ್ ಪ್ರಕಾಶ್, ಹೆಡ್ ಕಾನ್ಸ್ಟೇಬಲ್ ನಾಗರಾಜ್ ಸೇರಿದಂತೆ ಮೂವರ ಹೆಸರನ್ನು ದೋಷಾರೋಪ ಪಟ್ಟಿಯಲ್ಲಿ ಸೇರಿಸಲಾಗಿದೆ.
ಓದಿ : ಮಾಯಕೊಂಡ 'ಕಸ್ಟೋಡಿಯಲ್ ಡೆತ್' ಪ್ರಕರಣ: ಮಹತ್ವದ ಸಾಕ್ಷ್ಯ ಕಲೆ ಹಾಕ್ತಿರುವ ಸಿಐಡಿ
ಮರಳುಸಿದ್ದಪ್ಪ ಆತ್ಮಹತ್ಯೆಗೆ ಪೊಲೀಸರ ನಿರ್ಲಕ್ಷ್ಯವೇ ಕಾರಣ ಎಂಬುವುದು ತನಿಖೆಯಿಂದ ತಿಳಿದು ಬಂದಿದೆ. ಅನಧಿಕೃತವಾಗಿ ಆತನನ್ನು ಠಾಣೆಗೆ ಕರೆತಂದು ವಿಚಾರಣೆಗೆ ಗುರಿಪಡಿಸಿ ಠಾಣೆಯಲ್ಲಿ ಇರಿಸಿಕೊಂಡಿರುವುದು, ಮರುಳಸಿದ್ದಪ್ಪ ಆತ್ಮಹತ್ಯೆ ಮಾಡಿಕೊಂಡ ಬಳಿಕ ಶವವನ್ನು ಠಾಣೆಯಿಂದ ಕೊಂಡೊಯ್ದು ಬಸ್ ನಿಲ್ದಾಣದಲ್ಲಿ ಹಾಕಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಇದನ್ನು ಆದರಿಸಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.
ಮರುಳಸಿದ್ದಪ್ಪ ಸಾವು ಪೊಲೀಸರ ಹಲ್ಲೆಯಿಂದ ಆಗಿಲ್ಲ. ಬದಲಿಗೆ ಆತ್ಮಹತ್ಯೆಯಿಂದ ಆಗಿದೆ ಎನ್ನುವುದು ಆತನ ಮರಣೋತ್ತರ ಪರೀಕ್ಷೆಯಿಂದ ದೃಢಪಟ್ಟಿದೆ. ಈ ಅಂಶ ಈಗಾಗಲೇ ನ್ಯಾಯಾಂಗ ಬಂಧನದಲ್ಲಿರುವ ಮಾಯಕೊಂಡ ಪೊಲೀಸರ ತುಸು ನೆಮ್ಮದಿಗೆ ಕಾರಣವಾಗಿದೆ. ಪ್ರಕರಣ ಸಂಬಂಧ ಈಗಾಗಲೇ ಸೇವೆಯಿಂದ ಅಮಾನತುಗೊಂಡು ಕಳೆದ ಮೂರು ತಿಂಗಳಿನಿಂದ ನ್ಯಾಯಾಂಗ ಬಂಧನದಲ್ಲಿರುವ ಪಿಎಸ್ಐ , ಹೆಡ್ ಕಾನ್ ಸ್ಟೇಬಲ್ ಹಾಗೂ ಮತ್ತೊಬ್ಬ ಕಾನ್ಸ್ಟೇಬಲ್ಗೆ ಇದುವರೆಗೂ ಜಾಮೀನು ಸಿಕ್ಕಿಲ್ಲ.