ದಾವಣಗೆರೆ: ಹಲವು ಹಗರಣಗಳಿಂದ ಸದಾ ಸುದ್ದಿಯಲ್ಲಿರುವ ದಾವಣಗೆರೆ ವಿವಿಗೆ ಈಗ ಮತ್ತೊಂದು ಆರೋಪ ಸುತ್ತಿಕೊಂಡಿದೆ. 111 ಉಪನ್ಯಾಸಕರ ನೇಮಕಾತಿಯಲ್ಲಿ ಯುಜಿಸಿ ಹಾಗೂ ಸರ್ಕಾರ ನಿಯಮಗಳನ್ನು ಉಲ್ಲಂಘಿಸಿ, ಭ್ರಷ್ಟಾಚಾರ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಹೌದು, ಉಪನ್ಯಾಸಕರ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಪಿಹೆಚ್ಡಿ ಪದವೀಧರ ಡಾ.ರಮೇಶ.ಎಸ್. ವಡವಿ ಆರೋಪಿಸಿದ್ದಾರೆ. 2018 ರ ಅಕ್ಟೋಬರ್ ತಿಂಗಳಲ್ಲಿ ನೇಮಕಾತಿ ಪರೀಕ್ಷೆ ನಡೆದಿತ್ತು. ನೇಮಕಾತಿ ಪ್ರಕ್ರಿಯೆಯಲ್ಲಿ ಯುಜಿಸಿ ಹಾಗೂ ಸರ್ಕಾರಿ ನಿಯಮಾವಳಿಗಳನ್ನು ಗಾಳಿಗೆ ತೂರಿದ್ದಾರೆ. ತಮಗೆ ಬೇಕಾದ ಅಭ್ಯರ್ಥಿಗಳಿಗೆ ಹೆಚ್ಚು ಅಂಕ ನೀಡಿ ನೇಮಕ ಮಾಡಿದ್ದಾರೆ. ಇದರಲ್ಲಿ ಕುಲಪತಿ, ಕುಲಸಚಿವರು ಸೇರಿದಂತೆ ಮೇಲ್ಮಟ್ಟದ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಡಾ.ರಮೇಶ ಆರೋಪಿಸಿದ್ದಾರೆ.
ನೇಮಕಾತಿ ಪರೀಕ್ಷೆಯಲ್ಲಿ ಅಭ್ಯರ್ಥಿಗಳಿಗೆ ಕಾರ್ಬನ್ ಸಹಿತ ಒಎಂಆರ್ ಉತ್ತರ ಪತ್ರಿಕೆ ನೀಡಿಲ್ಲ. ಇದರಿಂದ ಅಭ್ಯರ್ಥಿಗಳಿಗೆ ತಾವು ಉತ್ತರಿಸಿದ ಪ್ರಶ್ನೆಗಳಿಗೆ ತಾಳೆ ನೋಡುವ ವ್ಯವಸ್ಥೆ ಕಳೆದುಕೊಂಡಂತಾಗಿದೆ. ಪರೀಕ್ಷೆ ನಂತರ ಕೀ ಉತ್ತರಗಳನ್ನು ವೆಬ್ಸೈಟ್ನಲ್ಲಿ ಪ್ರಕಟಿಸಿಲ್ಲ. ಅಭ್ಯರ್ಥಿಗಳ ಸ್ಕೋರ್ ವೆರಿಫಿಕೇಶನ್ಗೆ ಅವಕಾಶ ನೀಡಿಲ್ಲ. ನೇಮಕಾತಿಗೆ ನಿಗದಿಪಡಿಸಿದ ಸಂಖ್ಯೆಗಿಂತ ಹೆಚ್ಚು ಅಭ್ಯರ್ಥಿಗಳ ನೇಮಕವಾಗಿದೆ. ತಮಗೆ ಬೇಕಾದ ಅಭ್ಯರ್ಥಿಗಳ ನೇಮಕಾತಿ ಮಾಡಿದ್ದಾರೆ. ಪಾರದರ್ಶಕತೆ ಕಾಪಾಡಿಕೊಳ್ಳಲು ವಿಫಲರಾಗಿದ್ದಾರೆ. ಈ ಭ್ರಷ್ಟಾಚಾರ ಬಹಿರಂಗಗೊಳಿಸಲು ನಿರಂತರ ಹೋರಾಟ ಮಾಡುವುದಾಗಿ ಡಾ.ರಮೇಶ್ ತಿಳಿಸಿದರು.
ಕುಲಪತಿ, ಕುಲಸಚಿವರಿಗೆ ಸರ್ಕಾರ ಎಲ್ಲ ಸೌಲಭ್ಯಗಳನ್ನು ನೀಡುತ್ತದೆ. ಪ್ರತಿಭಾವಂತರಿಗೆ ಅನ್ಯಾಯವಾಗಿದೆ. ವಿವಿಯಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳ ಭವಿಷ್ಯಕ್ಕೆ ಇದು ಮಾರಕವಾಗಲಿದೆ. ದಾವಣಗೆರೆ ವಿವಿ ಕುಲಪತಿ ಎಸ್.ಎಸ್. ಹಲಸೆ ಅವರಿಂದಾಗಿ ವಿವಿ ಮಾನ ಹರಾಜಾಗುತ್ತಿದೆ. ಪಟ್ಟಭದ್ರ ಹಿತಾಕಕ್ತಿಗಳಿಂದಾಗಿ ದಾವಣಗೆರೆ ವಿವಿಯಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳ ಭವಿಷ್ಯಕ್ಕೆ ಅಂಧಕಾರ ಕವಿಯಲಿದೆ. ಎಲ್ಲ ವಿವಿಗಳು ಭ್ರಷ್ಟಾಚಾರದ ಕೂಪಗಳಾಗಿವೆ. ಸರ್ಕಾರ, ನಿವೃತ್ತ ನ್ಯಾಯಮೂರ್ತಿಗಳ ಸಮಿತಿ ರಚಿಸಿ ಸಮಗ್ರ ತನಿಖೆಗೆ ಆದೇಶಿಸಬೇಕು ಎಂದು ಹಾವೇರಿ ಜನಪದ ವಿವಿ ಉಪನ್ಯಾಸಕ ಡಾ.ಎನ್. ನಾಗರಾಜ್ ಆಗ್ರಹಿಸಿದ್ದಾರೆ.
ಇನ್ನೂ ಈ ಆರೋಪಕ್ಕೆ ಪ್ರತಿಕ್ರಿಯಿಸಿರುವ ದಾವಣಗೆರೆ ವಿವಿ ಕುಲಪತಿ ವಿ.ಎಸ್.ಹಲಸೆ, ನೇಮಕಾತಿ ಅಕ್ರಮ ನಡೆದಿದೆ ಎಂಬುದರಲ್ಲಿ ಸತ್ಯಾಂಶವಿಲ್ಲ. ಯುಜಿಸಿ ನಿಯಮಾವಳಿ ಪ್ರಕಾರ, 1/3 ಆಧಾರದಲ್ಲಿ ಮೆರಿಟ್ ಹಾಗೂ ಮೀಸಲಾತಿ ಆಧಾರದಲ್ಲಿ ಬೇರೆ ವಿವಿ ಪ್ರೊಫೆಸರ್ಗಳನ್ನು ಕರೆದು ನೇಮಕಾತಿ ಪ್ರಕ್ರಿಯೆ ನಡೆಸಲಾಗಿದೆ. ಪ್ರತಿಯೊಬ್ಬ ಅಭ್ಯರ್ಥಿಗೂ ವೈಯುಕ್ತಿಕ ಮಾಹಿತಿ ನೀಡಲಾಗಿದೆ. ಒಟ್ಟು ಅಂಕಗಳ ಅಗ್ರಿಗೇಡ್ನ್ನು ವೆಬ್ ಸೈಟ್ನಲ್ಲಿ ಹಾಕಿ ನಂತರ ಬಿಒಎ ಪ್ಯಾನಲ್ ನಿರ್ಣಯಿಸಿದ ಮೇಲೆ ನೇಮಕಾತಿ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.