ದಾವಣಗೆರೆ: ಕೇಂದ್ರದ ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ ಮತ್ತು ಅವರ ಪುತ್ರ ಪ್ರಿಯಾಂಕ್ ಖರ್ಗೆಗೆ ಅನಾಮಧೇಯ ವ್ಯಕ್ತಿ ಕರೆ ಮಾಡಿ ಬೆದರಿಕೆ ಹಾಕಿರುವುದನ್ನು ಖಂಡಿಸಿರುವ ಜಿಲ್ಲಾ ಛಲವಾದಿ ಮಹಾಸಭಾ, ಕೂಡಲೇ ಆರೋಪಿಯನ್ನು ಬಂಧಿಸುವಂತೆ ಆಗ್ರಹಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಹಾಸಭಾದ ಜಿಲ್ಲಾಧ್ಯಕ್ಷ ಎಸ್. ಶೇಖರಪ್ಪ, ಕಾಂಗ್ರೆಸ್ನ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ರಾಜಕಾರಣದಲ್ಲಿ ತುಂಬಾ ಅನುಭವ ಇರುವವರು. ಎಲ್ಲಾ ಸಮುದಾಯದವರನ್ನು ಸಮಾನಾಗಿ ಕಾಣುವ ನಾಯಕರು. ಶಾಸಕ ಪ್ರಿಯಾಂಕ್ ಖರ್ಗೆ ಸಹ ಎಲ್ಲರೊಂದಿಗೆ ಉತ್ತಮ ಒಡನಾಟ ಹೊಂದಿರುವವರು. ಇಂಥ ನಾಯಕರಿಗೆ ಕರೆ ಮಾಡಿ ಬೆದರಿಕೆ ಹಾಕಿರುವುದು ಸರಿಯಲ್ಲ ಎಂದು ಹೇಳಿದರು.
ಕೂಡಲೇ ಆರೋಪಿಯ ಬಂಧನ ಮಾಡದಿದ್ದರೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ ಅವರು, ಯಾವ ಸಮುದಾಯದ ನಾಯಕರಿಗೆ ಬೆದರಿಕೆ ಹಾಕುವುದು ಒಳ್ಳೆಯ ಬೆಳವಣಿಗೆ ಅಲ್ಲ. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.