ದಾವಣಗೆರೆ : ಜಾತಿ ಗಣತಿ ಮಾಡುವ ಪರಮಾಧಿಕಾರ ಕೇಂದ್ರ ಸರ್ಕಾರಕ್ಕಿದೆ. ಬ್ರಿಟೀಷರ ಕಾಲದಲ್ಲಿ ಜಾತಿ ಗಣತಿ ಆಗಿತ್ತು. ಇದೀಗ ಜಾತಿಗಣತಿ ಆಗಬೇಕೆಂಬ ಕೂಗು ಎಲ್ಲೆಡೆಯಿಂದ ಕೇಳಿಬಂದಿದೆ ಎಂದು ಕೂಡಲಸಂಗಮ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದರು. ನಗರದಲ್ಲಿಂದು ಹಡಪದ ಅಪ್ಪಣ್ಣ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜಾತಿ ಗಣತಿ ಯಾವುದೇ ದುರುದ್ದೇಶದಿಂದ ಕೂಡಿರಬಾರದು. ಅದು ಪ್ರತಿಯೊಂದು ಸಮಾಜಕ್ಕೂ ಸಾಮಾಜಿಕ ನ್ಯಾಯ ಕೊಡುವಂತಿರಬೇಕು. ಅವೈಜ್ಞಾನಿಕವಾಗಿ ಅಂಕಿಅಂಶಗಳ ಆಧಾರದ ಮೇಲೆ ಜಾತಿಗಣತಿ ಆಗಬೇಕು ಎಂದರು.
ಬೇರೆ ಬೇರೆ ರಾಜ್ಯಗಳಲ್ಲಿ ದುರುದ್ದೇಶದಿಂದ ಹಾಗೂ ಅವೈಜ್ಞಾನಿಕವಾಗಿ ಜಾತಿಗಣತಿ ಮಾಡಿದ್ದರಿಂದ ಸಮುದಾಯಗಳಿಗೆ ಅನ್ಯಾಯ ಆಗಿದೆ ಎಂಬ ಆರೋಪವೂ ಕೇಳಿಬಂದಿದೆ. ಆದ್ದರಿಂದ ಸಂವಿಧಾನದ ಆಶಯಗನುಗುಣವಾಗಿ, ಸುಪ್ರೀಂ ಕೋರ್ಟ್ನ ನೀತಿನಿಯಮಗಳಿಗೆ ಅನುಗುಣವಾಗಿ, ಯಾವುದೇ ಸಮುದಾಯಗಳನ್ನು ಟಾರ್ಗೆಟ್ ಮಾಡದೆ ಜಾತಿಗಣತಿ ಮಾಡಿದರೆ ದೇಶದ ಪ್ರಗತಿಗೆ ಕಾರಣವಾಗಲಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರವೇ ಜಾತಿಗಣತಿ ಮಾಡಬೇಕೆಂದು ಸುಪ್ರಿಂ ಕೋರ್ಟ್ ಹೇಳುತ್ತದೆ. ಈ ಹಿಂದೆ ರಾಜ್ಯದಲ್ಲಿ ಮಾಡಿದ ಜಾತಿಗಣತಿಯನ್ನು ಕೋರ್ಟ್ ನಿಯಮಗಳ ಅಡಿಯಲ್ಲಿ ಮಾಡದೇ ಇದ್ದುದರಿಂದ ಆರ್ಥಿಕ ಮತ್ತು ಸಾಮಾಜಿಕ ಸಮೀಕ್ಷೆ ಎಂದು ಕರೆದಿದ್ದರು. ಆದ್ದರಿಂದ ಕೇಂದ್ರ ಸರ್ಕಾರವೇ ಜಾತಿಗಣತಿ ಮಾಡಬೇಕೆಂದು ಸ್ವಾಮೀಜಿ ಒತ್ತಾಯಿಸಿದರು.
2ಎ ಮೀಸಲಾತಿಗೆ ಮತ್ತೆ ಹೋರಾಟ ಪ್ರಾರಂಭ: 2ಎ ಮೀಸಲಾತಿಗೆ ಮತ್ತೆ ಹೋರಾಟ ಮಾಡಲಾಗುವುದು. ಪ್ರತಿ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಮೀಸಲಾತಿಗೆ ಒತ್ತಾಯಿಸಲಾಗುವುದು ಎಂದು ಇದೇ ವೇಳೆ ಸ್ವಾಮೀಜಿ ಹೇಳಿದರು. ಕಳೆದ ಸರ್ಕಾರ 2D ಮೀಸಲಾತಿ ಘೋಷಣೆ ಮಾಡಿತ್ತು. ಆದರೆ ಆ ಮೀಸಲಾತಿ ಅನುಷ್ಠಾನ ಆಗಲಿಲ್ಲ. ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕು. ಸಾಮೂಹಿಕ ಇಷ್ಟಲಿಂಗ ಪೂಜೆ ಮೂಲಕ ಹೋರಾಟ ಶುರುವಾಗಿದೆ. ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ ಮಾಡಿ ಹೋರಾಟ ಮಾಡುತ್ತೇವೆ ಎಂದು ಹೇಳಿದರು.
ಆಕ್ಷೇಪ ವ್ಯಕ್ತಪಡಿಸಿದ ಬಸವಪ್ರಭು ಶ್ರೀ: ಹಡಪದ ಸಮುದಾಯಕ್ಕೆ ಮೀಸಲಾತಿ ಬೇಕಾದರೆ ಮಾತನಾಡುವ ಭರದಲ್ಲಿ ಯಾರೂ ಸಹ ಹೀಗೆ ಮಾಡಿ, ಹಾಗೆ ಮಾಡಿ ಎಂದು ಸಮಾಜದ ದಾರಿ ತಪ್ಪಿಸುವ ಹೇಳಿಕೆ ನೀಡಬಾರದು. ನಮ್ಮ ಸಮುದಾಯಗಳಿಗೆ ಸೌಲಭ್ಯ ಹಾಗೂ ಮೀಸಲಾತಿ ದೊರೆಯಬೇಕಾದರೆ ಬಸವ ಜಯಮೃತ್ಯುಂಜಯ ಶ್ರೀಗಳ ರೀತಿಯಲ್ಲಿ ಪಾದಯಾತ್ರೆ ಮಾಡಬೇಕು. ಆ ರೀತಿ ಹೋರಾಟ ಮಾಡಿದರೆ ಸಮಾಜಕ್ಕೆ ನ್ಯಾಯ ಸಿಗುತ್ತದೆ ಎಂದು ಹಡಪದ ಮಠದ ಶ್ರೀ ಅನ್ನದಾನಿ ಭಾರತಿ ಹಡಪದ ಅಣ್ಣಪ್ಪ ಸ್ವಾಮೀಜಿ ಅವರ ಹೇಳಿಕೆಗೆ ಮುರುಘಾಮಠದ ಉಸ್ತುವಾರಿ ಬಸವಪ್ರಭು ಶ್ರೀಗಳು ಆಕ್ಷೇಪ ವ್ಯಕ್ತಪಡಿಸಿದರು.
ಶ್ರೀಗಳ ಆಕ್ಷೇಪದ ಬಳಿಕ ತಮ್ಮ ಹೇಳಿಕೆ ಬಗ್ಗೆ ಮತ್ತೆ ಸ್ಪಷ್ಟನೆ ನೀಡಿದ ಅನ್ನದಾನಿ ಭಾರತಿ ಹಡಪದ ಅಣ್ಣಪ್ಪ ಸ್ವಾಮೀಜಿ, ನಾನು ಮೀಸಲಾತಿಗಾಗಿ ಬೆಂಕಿ ಹಚ್ಚಿ ಎಂದು ಹೇಳಲಿಲ್ಲ. ಬದಲಿಗೆ ಆ ಕಾಲ ಬಂದ್ರೂ ಬರಬಹುದು ಎಂದು ಹೇಳಿರುವುದಾಗಿ ಸ್ಪಷ್ಟಪಡಿಸಿದರು.
ಇದನ್ನೂ ಓದಿ : ಸರ್ಕಾರದಲ್ಲಿ ಲಿಂಗಾಯತ ಅಧಿಕಾರಿಗಳ ಕಡೆಗಣನೆ ಬಗ್ಗೆ ಶಾಮನೂರು ಹೇಳಿಕೆ ತಪ್ಪು: ಶಾಸಕ ಬಸವರಾಜ ರಾಯರೆಡ್ಡಿ