ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲೂಕಿನ ಕಾಕನೂರು ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ವಿಷಪೂರಿತ ಆಹಾರ ಪೂರೈಕೆ ಹಾಗೂ ಕರ್ತವ್ಯ ಲೋಪ ಎಸಗಿದ ಪ್ರಾಂಶುಪಾಲ ಮಂಜುನಾಥ್ ಪುರದ್ ಹಾಗೂ ನಿಲಯ ಪಾಲಕಿ ನಸೀಮಾ ಬಾನು ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ. ವಿ ಆದೇಶ ಹೊರಡಿಸಿದ್ದಾರೆ.
ಈ ವಸತಿ ಶಾಲೆಯಲ್ಲಿ ಸೋಮವಾರ ಬೆಳಗ್ಗೆ ಉಪಹಾರ ಸೇವಿಸಿದ ನಂತರ ಕೆಲ ವಿದ್ಯಾರ್ಥಿಗಳ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿತ್ತು. ತಕ್ಷಣ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಅಸ್ವಸ್ಥರಾಗಲು ವಿಷಪೂರಿತ ಆಹಾರ ಸೇವನೆ ಕಾರಣವಾಗಿದ್ದು, ಸರಿಯಾದ ನಿರ್ವಹಣೆ ಮಾಡದಿರುವುದು ಹಾಗೂ ಸ್ವಚ್ಛತೆ ಕಾಪಾಡಿಕೊಳ್ಳದಿರುವುದು ಕಾರಣವಾಗಿದೆ. ಈ ಘಟನೆಗೆ ವಸತಿ ಶಾಲೆಯ ಪ್ರಾಂಶುಪಾಲರು ಮತ್ತು ನಿಲಯ ಪಾಲಕಿ ಅವರು ಕರ್ತವ್ಯದ ವೇಳೆ ನಿರ್ಲಕ್ಷ್ಯ ವಹಿಸಿರುವುದು ಕಾರಣ ಎಂದು ಪರಿಗಣಿಸಿ ಅಮಾನತುಗೊಳಿಸಲಾಗಿದೆ.
ಹೆಚ್ಚುವರಿ ಪ್ರಭಾರ ವ್ಯವಸ್ಥೆ: ಕಾಕನೂರು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲರು ಮತ್ತು ನಿಲಯ ಪಾಲಕಿಯನ್ನು ಅಮಾನತುಗೊಳಿಸಿರುವುದರಿಂದ ಪ್ರಾಂಶುಪಾಲರನ್ನಾಗಿ ಮಾವಿನಹೊಳೆ ಇಂದಿರಾ ಗಾಂಧಿ ವಸತಿ ಶಾಲೆ ಪ್ರಾಂಶುಪಾಲರಾದ ಗುರುಮೂರ್ತ್ಯಪ್ಪ ಅವರಿಗೆ ಹೆಚ್ಚುವರಿ ಪ್ರಭಾರ ವಹಿಸಿಕೊಳ್ಳಲು ಆದೇಶಿಸಲಾಗಿದೆ. ಮತ್ತು ನಿಲಯ ಪಾಲಕರಾಗಿ ಕಾಕನೂರು ವಸತಿ ಶಾಲೆಯ ಸ್ಟಾಫ್ ನರ್ಸ್ ಅನಿತಾ ಆರ್. ಅವರಿಗೆ ಹೆಚ್ಚುವರಿ ಪ್ರಭಾರದಲ್ಲಿರಿಸಿ ಆದೇಶಿಸಲಾಗಿದೆ.
ಇದನ್ನೂ ಓದಿ: ಮೂವರು ಮಕ್ಕಳ ಅಸ್ವಸ್ಥ ಘಟನೆಗೆ ಟ್ವಿಸ್ಟ್: ತನಿಖೆ ವೇಳೆ ಅಸಲಿ ಕೃತ್ಯ ಬಯಲು
ಕೋಲಾರ ಜಿಲ್ಲೆಯ ಜಿಲ್ಲೆಯ ಬಂಗಾರಪೇಟೆ ತಾಲೂಕು ಗಡಿಯಲ್ಲಿರುವ ದೊಡ್ಡಪೊನ್ನಾಂಡಹಳ್ಳಿ ಗ್ರಾಮದ ಬಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿಯೂ ಇಂತಹದ್ದೇ ಘಟನೆಯೊಂದು ಸೋಮವಾರ ನಡೆದಿತ್ತು. ಕಲುಷಿತ ನೀರು ಸೇವನೆ ಮಾಡಿ 10ನೇ ತರಗತಿಯ ಇಬ್ಬರು ಮತ್ತು 9ನೇ ತರಗತಿ ಓರ್ವ ವಿದ್ಯಾರ್ಥಿ ಅಸ್ವಸ್ಥಗೊಂಡಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಸದ್ಯ ವಿದ್ಯಾರ್ಥಿಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆದರೆ, ಘಟನೆಗೆ ಟ್ವಿಸ್ಟ್ ಸಿಕ್ಕಿದ್ದು, ಇದೇ ಶಾಲೆಯ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ವಿದ್ಯಾರ್ಥಿಯೊಬ್ಬ ಕುಡಿಯುವ ನೀರಿಗೆ ವಿಷ ಪೂರಿತ ಪುಡಿ ಮಿಶ್ರಣ ಮಾಡಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಪೊಲೀಸರು ಮುಂದಿನ ತನಿಖೆ ನಡೆಸಿದ್ದಾರೆ.
ಮಕ್ಕಳ ಪ್ರಾಣಕ್ಕೆ ತೊಂದರೆ ಇಲ್ಲ ಎಂದು ವೈದ್ಯರು ಕೂಡ ದೃಢಪಡಿಸಿದ್ದಾರೆ. ಕುಡಿಯುವ ನೀರಿನಲ್ಲಿ ವಿಷ ಪೂರಿತ ಪುಡಿ ಮಿಶ್ರಣ ಮಾಡಿರುವ ಕುರಿತು ಸಂಶಯಗೊಂಡು ವಿಚಾರಣೆ ನಡೆಸಿದ ಕಾಮಸಮುದ್ರ ಪೊಲೀಸರು, ವಿದ್ಯಾರ್ಥಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣ ತನಿಖಾ ಹಂತದಲ್ಲಿರುವುದರಿಂದ ಹೆಚ್ಚಿನ ಮಾಹಿತಿ ನೀಡಲಾಗದು ಎಂದು ಸಹ ಅವರು ತಿಳಿಸಿದ್ದಾರೆ.