ದಾವಣಗೆರೆ: ಬೆಣ್ಣೆನಗರಿಯಲ್ಲಿ ವಿಧಾನಸಭೆ ಚುನಾವಣಾ ಕಣ ದಿನೇ ದಿನೇ ರಂಗೇರುತ್ತಿದೆ. ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳು ಜಿದ್ದಾಜಿದ್ದಿನ ಪ್ರಚಾರ ಮಾಡ್ತಿದ್ದು, ಗೆಲುವಿನ ಚುಕ್ಕಾಣಿ ಹಿಡಿಯಲು ತಂತ್ರ-ಪ್ರತಿತಂತ್ರ ಹೆಣೆಯುತ್ತಿದ್ದಾರೆ. ರಾಷ್ಟ್ರೀಯ ಪಕ್ಷಗಳ ಅಬ್ಬರದ ನಡುವೆ ಜೆಡಿಎಸ್ ಪಕ್ಷದ ಚನ್ನಗಿರಿ, ಮಾಯಕೊಂಡ ಹಾಗೂ ಹರಿಹರ ಕ್ಷೇತ್ರದ ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಮತ ಕೇಳುತ್ತಿದ್ದಾರೆ.
ರಾಷ್ಟೀಯ ಪಕ್ಷಗಳ ಅಭ್ಯರ್ಥಿಗಳು ಕಾರ್ಯಕರ್ತರ ದಂಡು ಕಟ್ಟಿಕೊಂಡು ವಾಹನದಲ್ಲಿ ಪ್ರಚಾರ ಮಾಡ್ತಿದ್ರೆ ಜೆಡಿಎಸ್ ಹುರಿಯಾಳುಗಳು ಆಡಂಬರವಿಲ್ಲದ ಪ್ರಚಾರ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಜೆಡಿಎಸ್ ತನ್ನದೇ ಆದ ಮತಗಳನ್ನು ಹೊಂದಿದ್ದು ಖಾತೆ ತೆರೆಯಲು ಹೋರಾಡುತ್ತಿದೆ. ಚನ್ನಗಿರಿ ಮತಕ್ಷೇತ್ರದಲ್ಲಿ ಮಾಜಿ ಸಿಎಂ ದಿ.ಜೆ.ಹೆಚ್.ಪಟೇಲ್ ಅವರು ಜನತಾ ಪರಿವಾರವನ್ನು ಕಟ್ಟಿ ಬೆಳೆಸಿದ್ದರು. ಇದೀಗ ಅದೇ ಕ್ಷೇತ್ರದಲ್ಲಿ ಪಟೇಲರ ಸಹೋದರನ ಪುತ್ರ ತೇಜಸ್ವಿ ಪಟೇಲ್ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿಳಿದಿದ್ದಾರೆ.
ಪ್ರಚಾರದ ವೇಳೆ ಮಾತನಾಡಿದ ತೇಜಸ್ವಿ ಪಟೇಲ್, ರಾಷ್ಟ್ರೀಯ ಪಕ್ಷಗಳದ್ದು ಅಡಂಬರದ ಪ್ರಚಾರವಾದರೆ ನಮ್ಮದು ಸ್ಮಾರ್ಟ್ ವರ್ಕ್. ಜೆ.ಹೆಚ್.ಪಟೇಲರ ಮನೆತನದವರು ರಾಜಕೀಯಕ್ಕೆ ಬರಬೇಕು ಎಂದು ಹೇಳುತ್ತಿದ್ದಾರೆ. ಈ ಬಾರಿ ಗೆಲುವು ನಮ್ಮದಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಹರಿಹರದಲ್ಲಿ ಜೆಡಿಎಸ್ ಅಭ್ಯರ್ಥಿ ಹೆಚ್.ಎಸ್.ಶಿವಶಂಕರ್ ಕಣಕ್ಕಿಳಿದು ಕಾಂಗ್ರೆಸ್ ಹಾಗು ಬಿಜೆಪಿಗೆ ಠಕ್ಕರ್ ಕೊಡುವ ಉತ್ಸಾಹದಲ್ಲಿದ್ದಾರೆ. 2013ರಲ್ಲಿ ಜೆಡಿಎಸ್‌ನಿಂದ ಗೆದ್ದು ಬೀಗಿದ್ದ ಶಿವಶಂಕರ್ ಈ ಬಾರಿ ಗೆಲುವು ಸಾಧಿಸಲು ತಂತ್ರಗಳನ್ನು ರೂಪಿಸುತ್ತಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿಂದು ಪ್ರಧಾನಿ ಮೋದಿ 2ನೇ ಹಂತದ ಮತಬೇಟೆ: 7 ಕಡೆ ಸಮಾವೇಶ, ರ‍್ಯಾಲಿಯಲ್ಲಿ ಭಾಗಿ
ಇನ್ನು ಮಾಯಕೊಂಡ ಎಸ್ಸಿ ಮೀಸಲು ಕ್ಷೇತ್ರದಲ್ಲೂ ಜೆಡಿಎಸ್ ಹುರುಪಿನ ಮತಬೇಟೆ ನಡೆಸುತ್ತಿದೆ. ಕಾಂಗ್ರೆಸ್ ಟಿಕೆಟ್ ಕೈತಪ್ಪಿದ್ದರಿಂದ ಜೆಡಿಎಸ್‌ಗೆ ಹಾರಿದ ಆನಂದಪ್ಪ ಇದೀಗ ತಮ್ಮ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗು ಬಿಜೆಪಿಯ ಕೆಲ ಮತಗಳನ್ನು ಸೆಳೆಯಲ ಪ್ರಯತ್ನಿಸುತ್ತಿದ್ದಾರೆ. ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಬಸವಪಟ್ಟಣ ಹೋಬಳಿಯ ಮತಗಳು ತೇಜಸ್ವಿ ಪಟೇಲ್ ಜೆಡಿಎಸ್ ಸೇರಿದ್ದರಿಂದ ಆನಂದಪ್ಪನವರಿಗೆ ಸಿಗಲಿವೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ದೇಶಕ್ಕೆ ಉತ್ತಮ ಕಾರ್ಯಕ್ರಮ ನೀಡಿದ್ದು ಕಾಂಗ್ರೆಸ್.. ಬಿಜೆಪಿ ನಮ್ಮ ಬಗ್ಗೆ ಅಪಪ್ರಚಾರ ಮಾಡ್ತಿದೆ: ಎಂ.ಬಿ ಪಾಟೀಲ್