ದಾವಣಗೆರೆ: ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಸಾಗಣೆ ವೇಳೆ ಏನಾದರೂ ಕಿರುಕುಳ ಆಗುತ್ತಿದೆಯಾ ? ನೇರವಾಗಿ ಹೇಳಲು ಆಗದಿದ್ದರೆ ಕರೆ ಮಾಡಿ ತಿಳಿಸಿ ಭಯ ಪಡಬೇಡಿ ಎಂದು ಸಹಕಾರ ಸಚಿವ ಎಸ್. ಟಿ. ಸೋಮಶೇಖರ್ ತಿಳಿಸಿದರು. ನಗರದ ಎಪಿಎಂಸಿ ಮಾರುಕಟ್ಟೆಗೆ ಭೇಟಿ ನೀಡಿದ ಅವರು ಲಾರಿ ಮಾಲೀಕರು, ಚಾಲಕರ ಜೊತೆ ಮಾತನಾಡಿ ಅವರಿಗೆ ಅಭಯ ನೀಡಿದರು.
ಎಪಿಎಂಸಿ ಮಾರುಕಟ್ಟೆಗೆ ಸೋಮಶೇಖರ್ ಭೇಟಿ ಬಳಿಕ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‍ಗೆ ಭೇಟಿ ನೀಡಿದ ಎಸ್. ಟಿ. ಸೋಮಶೇಖರ್, ಬ್ಯಾಂಕ್ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಕಳೆದ ಸಾಲಿನಲ್ಲಿ 18 ಸಾವಿರ ರೈತರಿಗೆ ರೂ. 86 ಕೋಟಿ ಸಾಲ ನೀಡಲಾಗಿದ್ದು, ಈ ಬಾರಿಯೂ ಅಷ್ಟೇ ಸಾಲ ನೀಡಿ ಎಂದು ತಿಳಿಸಿದರು. ಬ್ಯಾಂಕಿನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಹೆಚ್.ಲಕ್ಷ್ಮಣ್ ಪ್ರಗತಿ ಬಗ್ಗೆ ಮಾತನಾಡಿ ಸಾಲ ಮನ್ನಾ ಯೋಜನೆಯಡಿ ಡಿಸಿಸಿ ಬ್ಯಾಂಕಿಗೆ ರೂ. 216 ಕೋಟಿ ಬಿಡುಗಡೆಯಾಗಬೇಕಿದ್ದು, ಇದರಲ್ಲಿ ರೂ.182 ಕೋಟಿ ಬಿಡುಗಡೆಯಾಗಿದೆ. ಇನ್ನು ರೂ.34 ಕೋಟಿ ಬಾಕಿ ಇದೆ. ಈ ಬಾಕಿ ಹಣ ಬಂದರೆ ಜಿಲ್ಲೆ ಹಸಿರು ಪಟ್ಟಿಗೆ ಸೇರ್ಪಡೆಗೊಳ್ಳಲಿದೆ ಎಂದರು.ಎಪಿಎಂಸಿ ಮಾರುಕಟ್ಟೆಗೆ ಸೋಮಶೇಖರ್ ಭೇಟಿ ಈ ವೇಳೆ, ಕೊರೊನಾ ನಿಯಂತ್ರಣ ಹಿನ್ನೆಲೆ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ವತಿಯಿಂದ ರೂ 10 ಲಕ್ಷ ದೇಣಿಗೆ ನೀಡಲಾಯಿತು.