ದಾವಣಗೆರೆ: ನೆರೆ ವಿಚಾರದಲ್ಲಿ ರಾಜಕೀಯ ಮಾಡುತ್ತಿರುವ ಕಾಂಗ್ರೆಸ್ಗೆ ಶಾಪ ತಟ್ಟಿದ್ದು, ಏಳು ಜನ್ಮಕ್ಕೂ ಅದು ವಿಮೋಚನೆಯಾಗಲ್ಲ ಎಂದು ಪ್ರವಾಸೋದ್ಯಮ ಸಚಿವ ಸಿ. ಟಿ. ರವಿ ಕಿಡಿಕಾರಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ನಾವು ಶಾಪ ಕೊಡುವಷ್ಟರ ಮಟ್ಟಿಗೆ ಇಲ್ಲ. ಕಾಂಗ್ರೆಸ್ ಸರ್ಕಾರ ನೀಡಿದ್ದಕ್ಕಿಂತ ಹೆಚ್ಚು ಪರಿಹಾರವನ್ನು ಬಿಜೆಪಿ ಸರ್ಕಾರ ನೀಡಿದೆ. ನೆರೆ ಪರಿಹಾರ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದು ಹೇಳಿದ್ರು.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ಕಾಂಗ್ರೆಸ್ - ಜೆಡಿಎಸ್ ನಾಯಕರು ಮೈತ್ರಿ ಮಾಡಿಕೊಂಡಿದ್ದರು. ಬಳಿಕ ತಿಪ್ಪರಲಾಗ ಹಾಕಿ ತಲಾ ಒಂದೊಂದು ಸೀಟು ಗೆದ್ದಿದ್ದರು. ಸ್ವಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲ್ಲಲು ಆಗದೇ ಬೇರೆ ಕಡೆ ಹೋಗಿ ಸ್ಪರ್ಧಿಸಿ ಅಂತೂ ಇಂತೂ ಕಷ್ಟಪಟ್ಟು ಕಾಂಗ್ರೆಸ್ ನಾಯಕರು ಜಯ ಗಳಿಸಿದ್ದರು. ಇದಕ್ಕಿಂತ ಹೀನಾಯ ಸ್ಥಿತಿ ಬೇಕಾ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೆಸರನ್ನು ಪ್ರಸ್ತಾಪಿಸದೇ ಸಿ ಟಿ ರವಿ ಟೀಕಿಸಿದ್ರು.
ಸಭ್ಯ ಭಾಷೆ ಬಳಸಿಲ್ಲ
ಇನ್ನು ಮಾಜಿ ಸಚಿವರಾದ ಹೆಚ್. ವಿಶ್ವನಾಥ್ ಹಾಗೂ ಸಾ. ರಾ. ಮಹೇಶ್ ನಡುವಿನ ಸಮರದ ಬಗ್ಗೆ ಪ್ರತಿಕ್ರಿಯಿಸಿದ ಸಿ. ಟಿ. ರವಿ, ಇಬ್ಬರೂ ಮೈಸೂರಿನ ಭಾಷಾ ಸಭ್ಯತೆ ಬಿಟ್ಟು ಮಾತನಾಡಿದ್ದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ರಾಜಕಾರಣಿಗಳನ್ನು ಕೆಟ್ಟದಾಗಿ ನೋಡುವ ಇಂದಿನ ಪರಿಸ್ಥಿತಿಯಲ್ಲಿ ನಾಯಕರ ಅವಾಚ್ಯ ಪದಗಳ ಬಳಕೆಯಿಂದ ಮತ್ತಷ್ಟು ಕೆಟ್ಟ ಹೆಸರು ಬರುತ್ತದೆ. ರಾಜಕಾರಣದಲ್ಲಿ ಟೀಕೆ ಟಿಪ್ಪಣಿ ಸಹಜ. ಆದ್ರೆ ಎಲ್ಲೆ ಮೀರದಿರಲಿ ಎಂದರು.