ದಾವಣಗೆರೆ:ಹೊನ್ನಾಳಿ ತಾಲೂಕಿನ ಕತ್ತಿಗೆ ಗ್ರಾಮದಲ್ಲಿ ಹೋರಿ ಸ್ಪರ್ಧೆಗೆ ಚಾಲನೆ ನೀಡುವ ವೇಳೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯರ ಮೇಲೆ ಹೋರಿ ಹಾರಿದ ಘಟನೆ ನಡೆದಿದೆ.
ಕತ್ತಿಗೆ ಗ್ರಾಮದಲ್ಲಿ ಹೋರಿ ಬೆದರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹೊನ್ನಾಳಿ ಶಾಸಕ ರೇಣುಕಾಚಾರ್ಯ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಅದ್ಧೂರಿ ಸ್ವಾಗತ ಕೋರಲಾಯಿತು. ಹೋರಿ ಬೆದರಿಸುವ ಸ್ಪರ್ಧೆಗೆ ಚಾಲನೆ ನೀಡುವ ವೇಳೆ ರೇಣುಕಾಚಾರ್ಯರನ್ನು ನೋಡಿ ಇದ್ದಕ್ಕಿದ್ದಂತೆಯೇ ಹೋರಿ ಬೆದರಿತು. ರೇಣುಕಾಚಾರ್ಯ ಹೋರಿ ಹಿಡಿಯಲು ಮುಂದಾಗುತ್ತಿದ್ದಂತೆಯೇ ಹೋರಿ ನುಗ್ಗುವ ಯತ್ನ ನಡೆಸಿತು. ಇದರಿಂದ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಯಿತು. ರೇಣುಕಾಚಾರ್ಯ ಹೋರಿ ಹಿಡಿಯುತ್ತಿದ್ದಂತೆಯೇ ಜಿಗಿದು ಎಳೆದಾಡಿತು. ಈ ಅವಘಡದಲ್ಲಿ ಸ್ವಲ್ಪದರಲ್ಲಿಯೇ ಹೊನ್ನಾಳಿ ಶಾಸಕರು ಪಾರಾಗಿದ್ದಾರೆ.
ಹೋರಿ ಜಿಗಿಯುತ್ತಿದ್ದಂತೆಯೇ ರೇಣುಕಾಚಾರ್ಯರನ್ನು ಸ್ಥಳದಲ್ಲಿ ಇದ್ದ ಕಾರ್ಯಕರ್ತರು ರಕ್ಷಿಸಿದರು. ಇದರಿಂದ ಅನಾಹುತ ತಪ್ಪಿದೆ. ಇತ್ತೀಚೆಗೆ ದೊಡ್ಡೇರಿ ಗ್ರಾಮದಲ್ಲಿ ಹೋರಿ ತಿವಿತಕ್ಕೆ ರೇಣುಕಾಚಾರ್ಯ ಒಳಗಾಗಿದ್ದರು. ಇಂದು ಮತ್ತೆ ಹೋರಿ ಬೆದರಿಸುವ ಸ್ಪರ್ಧೆಗೆ ತೆರಳಿದ್ದ ವೇಳೆ ಈ ಘಟನೆ ನಡೆದಿರುವುದು ಕುತೂಹಲಕ್ಕೆ ಕಾರಣವಾಗಿದೆ.