ದಾವಣಗೆರೆ: ಬಿಜೆಪಿಯ ಮಾಜಿ ಶಾಸಕರು ನನಗೆ ಫೋನ್ ಮಾಡಿ ಪಕ್ಷ ಬಿಡುವ ಬಗ್ಗೆ ಮಾತನಾಡಿದರು. ಆದರೆ ನಾನು ಪಕ್ಷ ತೊರೆಯಲ್ಲ ಎಂದು ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ. ಇಂದು ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಕ್ಷಕ್ಕೆ ಸಮರ್ಥ ನಾಯಕತ್ವ ಬೇಕು, ನಮಗೆ ಅಭದ್ರತೆ ಕಾಡ್ತಿದೆ ಎಂದು ಮಾಜಿ ಶಾಸಕರು, ಮುಖಂಡರು ದೂರವಾಣಿ ಕರೆ ಮಾಡಿ ಪಕ್ಷ ಬಿಡುವ ಕುರಿತು ಹೇಳಿದರು ಎಂದು ಅವರು ತಿಳಿಸಿದರು.
ಬಳಿಕ ಕಾಂಗ್ರೆಸ್ ನಾಯಕರ ಭೇಟಿ ಕುರಿತು ಪ್ರತಿಕ್ರಿಯೆ ನೀಡಿ, ಹೊನ್ನಾಳಿ, ನ್ಯಾಮತಿ ತಾಲ್ಲೂಕಗಳನ್ನು ಬರಗಾಲ ಪಟ್ಟಿಗೆ ಸೇರ್ಪಡೆಗೊಳಿಸಲು ಒತ್ತಾಯಿಸಿದ್ದೇನೆ. ಅನುದಾನ ಪೆಂಡಿಂಗ್ ಇತ್ತು. ಮರುಚಾಲನೆ ಕೊಡುವಂತೆ ಕಾಂಗ್ರೆಸ್ ನಾಯಕರನ್ನು ಭೇಟಿಯಾಗಿದ್ದೇನೆ. ನಾನು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುತ್ತೇನೆ ಎಂದು ಎಲ್ಲೂ ಹೇಳಿಲ್ಲ. ಯಡಿಯೂರಪ್ಪ ಅವರು ಕೂಡ ಪಕ್ಷ ಬಿಡದಿರಲು ಹೇಳಿದ್ದಾರೆ ಎಂದರು.
ಪಕ್ಷ ಬಿಟ್ಟು ಹೋಗುವವರು ಹೋಗಲಿ, ನಾನು ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವೆ ಎಂದು ಸಂಸದ ಜಿ.ಎಂ.ಸಿದ್ದೇಶ್ವರ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಅಧಿಕೃತವಾಗಿ ಯಾರಿಗೂ ಎಂಪಿ ಟಿಕೆಟ್ ಘೋಷಣೆ ಮಾಡಿಲ್ಲ. ಸಿದ್ದೇಶ್ವರ್ ಬಗ್ಗೆ ಗೌರವ ಇದೆ, ವಯಸ್ಸಿನಲ್ಲಿ ಹಿರಿಯರು. ಇವರ ತಂದೆ ಮಲ್ಲಿಕಾರ್ಜುನಪ್ಪ ಅವರ ಮೂರು ಚುನಾವಣೆ, ಸಿದ್ದೇಶ್ವರ್ ಅವರ ನಾಲ್ಕು ಚುನಾವಣೆ ಸಮಯದಲ್ಲಿ ನಾನು ಜತೆಗಿದ್ದೇನೆ.
ಆದರೆ ಬಹಳಷ್ಟು ಜನರನ್ನೂ ಮೂಲೆಗುಂಪು ಮಾಡುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ. ಮಾಜಿ ಸಚಿವ ಎಸ್ಎ ರವೀಂದ್ರನಾಥ್‌ರನ್ನು ಮುಗಿಸಿದರು. ಮಾಡಾಳ್ ವಿರೂಪಾಕ್ಷಪ್ಪನವರನ್ನು ಮುಗಿಸಿದರು, ಗುರುಸಿದ್ದನಗೌಡರನ್ನು ಮುಗಿಸಿದರು. ಬಳಿಕ ಸಚಿವರಾಗಲು ಬಿಡಲಿಲ್ಲ. ಮಾಡಾಳ್ ಮಲ್ಲಿಕಾರ್ಜುನ್ ರಾಜಕೀಯವಾಗಿ ಬೆಳೆಯುತ್ತಿದ್ದ ಅವರನ್ನು ಮುಗಿಸಿದರು. ಎಲ್ಲರನ್ನೂ ಮುಗಿಸುವ ಕೆಲಸ ಮಾಡಿದ್ದಾರೆ. ಇದೀಗ ನನ್ನ ವಿರುದ್ಧ ವಿನಾಕಾರಣ ಅಪಪ್ರಚಾರ ಮಾಡುತ್ತಿದ್ದಾರೆ. ನಾನು ಟಿಕೆಟ್ ಆಕಾಂಕ್ಷಿ ಅಂದಾಕ್ಷಣ ನನ್ನನ್ನು ಮುಗಿಸುವ ಕೆಲಸ ಮಾಡುತ್ತಿದ್ದಾರೆ, ಅದು ಸಾಧ್ಯವಿಲ್ಲ ಎಂದು ಆಕ್ರೋಶ ಹೊರಹಾಕಿದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಹೊನ್ನಾಳಿಯ ಲಿಂಗದಹಳ್ಳಿಯಲ್ಲಿ, ಇದು ನನ್ನ ಕೊನೆ ಚುನಾವಣೆ ಎಂದು ಸಿದ್ದೇಶ್ವರ್ ಹೇಳಿದ್ದರು. ಇದೀಗ ನಾನು ಟಿಕೆಟ್ ಆಕಾಂಕ್ಷಿ ಎಂದ ತಕ್ಷಣ ಅವರು ಕೆರಳಿದ್ದಾರೆ. ಇವರ ವಿರುದ್ಧ ಕಾರ್ಯಕರ್ತರು ಕೂಡ ನೋವು ತೋಡಿಕೊಂಡಿದ್ದಾರೆ ಎಂದರು.
ಕಾಂಗ್ರೆಸ್ ಪರ ಸಾಫ್ಟ್ ಕಾರ್ನಾರ್ ಇಲ್ಲ: ಐಟಿ ದಾಳಿ ವೇಳೆಯಲ್ಲಿ ಹಣ ಸಿಕ್ಕ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಈ ವಿಚಾರವಾಗಿ ಸರ್ಕಾರ ತನಿಖೆ ಮಾಡಲಿ. ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ, ನಾನು ಕಾಂಗ್ರೆಸ್ ಪರ ಸಾಫ್ಟ್ ಕಾರ್ನಾರ್ ಹೊಂದಿಲ್ಲ, ರಾಜ್ಯ ಸರ್ಕಾರದ ಸಾಕಷ್ಟು ಭಾಗ್ಯಗಳ ಬಗ್ಗೆ ಟೀಕೆ ಮಾಡಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ: ನನ್ನನ್ನು ಜೈಲಿಗೆ ಕಳುಹಿಸಲು ಕಟೀಲ್, ಕುಮಾರಸ್ವಾಮಿ ಜಡ್ಜ್ ಅಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್