ದಾವಣಗೆರೆ: ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗೆ ಆಣೆ ಪ್ರಮಾಣ ನಡೆದ ಘಟನೆ ಜಿಲ್ಲೆಯ ಹರಿಹರ ತಾಲೂಕಿನ ಭಾನುವಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ.
ಬಿಜೆಪಿಯಿಂದ ಉಪಾಧ್ಯಕ್ಷ ಸ್ಥಾನಕ್ಕೆ ವೆಂಕಟರೆಡ್ಡಿ, ಕಾಂಗ್ರೆಸ್ ನಿಂದ ಚಂದ್ರಪ್ಪ ಸ್ಪರ್ಧೆ ಮಾಡಿದ್ದರು. ಉಪಾಧ್ಯಕ್ಷ ಸ್ಥಾನದಿಂದ ವೆಂಕಟರೆಡ್ಡಿ ಸೋತಿದ್ದರು. ಉಪಾಧ್ಯಕ್ಷ ಚುನಾವಣೆ ಸೋತಿದಕ್ಕೆ ವೆಂಕಟರೆಡ್ಡಿಗೆ ಮತದಾನ ಮಾಡಿದ್ದೀರೋ ಇಲ್ವೋ ಎಂಬ ಬಗ್ಗೆ ಪಂಚಾಯಿತಿ ಸದಸ್ಯರನ್ನು ಚೌಡಮ್ಮನ ಹೆಸರಿನಲ್ಲಿ ಆಣೆ ಮಾಡಿಸಲಾಯಿತು ಎನ್ನಲಾಗಿದೆ.
ನಾನು ದೇವಸ್ಥಾನದ ಗಂಟೆ ಹೊಡೆದು ಚೌಡಮ್ಮನ ಮೇಲೆ ಆಣೆ ಮಾಡ್ತೀನಿ, ನಾನು ವೆಂಕಟ ರೆಡ್ಡಿಗೆ ವೋಟು ಹಾಕಿದ್ದೆ ಎಂದು ಸದಸ್ಯರು ಆಣೆ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಒಟ್ಟು 23 ಸದಸ್ಯರ ಬಲ ಹೊಂದಿದ್ದ ಭಾನುವಳ್ಳಿ ಗ್ರಾಮ ಪಂಚಾಯಿತಿಯಲ್ಲಿ 12 ಬಿಜೆಪಿ, 11 ಕಾಂಗ್ರೆಸ್ ಸದಸ್ಯರ ಬಲಾಬಲವಿತ್ತು. 12 ವೋಟು ಪಡೆದು ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ನೇತ್ರಾವತಿ ಆಯ್ಕೆಯಾಗಿದ್ದಾರೆ. ಆದರೆ ಅದೇ ಪಕ್ಷದ ಅಭ್ಯರ್ಥಿ ವೆಂಕಟರೆಡ್ಡಿ ಸೋಲಾನುಭವಿಸಿದ್ದು ತಮಗೆ ಯಾರು ವೋಟು ಹಾಕಿಲ್ಲ ಎಂಬುದನ್ನು ಖಚಿತ ಪಡಿಸಿಕೊಳ್ಳಲು ಆಣೆ ಪ್ರಮಾಣ ಮಾಡಿಸಲಾಯಿತು ಎಂದು ಹೇಳಲಾಗಿದೆ.