ದಾವಣಗೆರೆ: ನಟ, ನಟಿ, ನಿರ್ದೇಶಕ ಸೇರಿದಂತೆ ಎಲ್ಲರೂ ಹೊಸಬರೆ. ಹೊಸ ಪ್ರತಿಭೆಗಳೇ ಸೇರಿಕೊಂಡು ನಿರ್ಮಾಣ ಮಾಡಿರುವ ಭಾನು ಮತ್ತು ಭುವಿ ಸಿನಿಮಾ ತೆರೆಗೆ ಬರಲು ತಯಾರಾಗಿ ನಿಂತಿದೆ. ಶೀಘ್ರದಲ್ಲಿಯೇ ರಾಜ್ಯದ ಎಲ್ಲಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದ್ದು, ಚಿತ್ರದ ಪ್ರಮೋಷನ್ಗಾಗಿ ಚಿತ್ರತಂಡ ಬೆಣ್ಣೆನಗರಿಗೆ ಆಗಮಿಸಿದೆ.
ರಾಜ್ಯಾದ್ಯಂತ ಪ್ರಚಾರ ಕಾರ್ಯ ಶುರು ಮಾಡಿರುವ ಈ ತಂಡ, ಸಿನಿಮಾದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿತು. ಚಿತ್ರದ ನಿರ್ದೇಶಕ, ನಾಯಕ ನಟ, ನಟಿ ಸೇರಿದಂತೆ ಎಲ್ಲರೂ ಹೊಸಬರೇ. ಬಿ. ಆರ್. ಆದಿ ನಿರ್ದೇಶಿಸಿರುವ ಈ ಚಿತ್ರದ ನಾಯಕ ಸೂರ್ಯಪ್ರಭ. ನಾಯಕಿ ಶಿವಮೊಗ್ಗದವರಾದ ನಿಶ್ಚಿತ. ಇಲ್ಲಿ ಭಾನು ಮತ್ತು ಭುವಿಯ ಪ್ರೇಮ ಕಥೆಯ ನಡುವೆ ಯಾರು ಬರುತ್ತಾರೆ, ಬಳಿಕ ಕ್ಲೈಮ್ಯಾಕ್ಸ್ ಏನಾಗುತ್ತದೆ ಎಂಬುದೇ ಚಿತ್ರದ ಕಥಾಹಂದರವಾಗಿದೆ.
ಇದೊಂದು ವಿಭಿನ್ನ ಪ್ರೇಮ ಕಥೆಯಾಗಿದ್ದು, ಬೇರೆ ಸಿನಿಮಾಗಿಂತ ಫುಲ್ ಡಿಫರೆಂಟ್ ಕಥೆ ಹೊಂದಿದೆ ಅನ್ನೋದು ಚಿತ್ರ ತಂಡದ ಮಾತು. ಈ ಚಿತ್ರವನ್ನು ರಾಜ್ಯದ ಹಲವು ಭಾಗಗಳಲ್ಲಿ ಚಿತ್ರೀಕರಣ ಮಾಡಲಾಗಿದ್ದು, ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿರುವುದಾಗಿ ಚಿತ್ರದ ನಿರ್ದೇಶಕ ಆದಿ ಹೇಳಿದ್ದಾರೆ. ಇನ್ನು, ಚಿತ್ರದಲ್ಲಿ ಹಿರಿಯ ಹಾಸ್ಯ ನಟ ರಂಗಾಯಣ ರಘು ಹಾಗೂ ಶೋಭರಾಜ್ ಕೂಡ ನಟಿಸಿದ್ದು, ಅವರನ್ನು ಭಿನ್ನವಾಗಿ ತೋರಿಸುವ ಪ್ರಯತ್ನ ಮಾಡಲಾಗಿದೆ ಎಂದಿದ್ದಾರೆ.
ಚಿತ್ರದ ಬಗ್ಗೆ ಚಿತ್ರತಂಡವು ಬಹಳಷ್ಟು ನಿರೀಕ್ಷೆ, ಕುತೂಹಲ ಇಟ್ಟುಕೊಂಡಿದೆ. ಪ್ರೇಕ್ಷಕರು ಯಾವ ರೀತಿ ಸ್ವೀಕರಿಸುತ್ತಾರೆ ಎಂಬುದು ಚಿತ್ರ ಬಿಡುಗಡೆಯಾದ ಬಳಿಕ ತಿಳಿಯಬೇಕಿದೆ.