ದಾವಣಗೆರೆ: ಚಿತ್ರದುರ್ಗದ ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಅಪ್ರಾಪ್ತರ ಮೇಲೆ ಲೈಂಗಿಕ ಆರೋಪ ಕೇಳಿ ಬಂದಿದೆ. ಆದರೆ ಆ ಆರೋಪ ಸಾಬೀತಾದ ಬೆನ್ನಲ್ಲೇ ಇದೀಗ ಮುರುಘಾ ಶರಣರ ಬಂಧನ ಕೂಡ ಆಗಿದೆ. ಸತತ ಏಳು ದಿನಗಳ ಬಳಿಕ ಶ್ರೀಯ ಅವರನ್ನು ತನಿಖೆ ನಡೆಸಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದರೆ ಇದೀಗ ದಾವಣಗೆರೆಯಲ್ಲಿ ಈ ಪ್ರಕರಣವನ್ನು ಸಿಬಿಐಗೆ ವಹಿಸಿ ಎಂಬ ಕೂಗು ಪ್ರಗತಿಪರರಿಂದ ಕೇಳಿ ಬಂದಿದೆ.
ಚಿತ್ರದುರ್ಗದ ಮುರುಘಾ ಮಠದ ಮುರುಘಾ ಶರಣರ ಬಂಧನವಾಗಿದೆ. ದಾವಣಗೆರೆಯಲ್ಲೂ ಅಪಾರವಾದ ಭಕ್ತ ಗಣವನ್ನು ಹೊಂದಿರುವ ಶ್ರೀಯವರ ವಿರುದ್ಧ ದಲಿತ ಪರ ಸಂಘಟನೆಯವರು ಹಾಗೂ ಪ್ರಗತಿಪರರು ತಿರುಗಿಬಿದ್ದಿದ್ದಾರೆ. ಇತ್ತಾ ಅವರ ಶಾಖ ಮಠದ ಶ್ರೀ ಬಸವ ಪ್ರಭು ಸ್ವಾಮೀಜಿಯವರು ಶ್ರೀಯವರ ಬಂಧನ ಖಂಡಿಸಿ ಮೌನ ಪ್ರತಿಭಟನೆಗಿಳಿದಿದ್ದಾರೆ.
ಮುರುಘಾ ಶರಣರು ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಪೊಲೀಸರ ತನಿಖೆಯಿಂದ ಸಾಬೀತಾದ ಬೆನ್ನಲ್ಲೇ ಸಿಬ್ಬಂದಿ ಅವರನ್ನು ಬಂಧಿಸಿದ್ದಾರೆ. ಆದ್ರೆ ಧಿಡೀರ್ ಶ್ರೀಯವರ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಆಸ್ಪತ್ರೆಗೆ ದಾಖಲಾಗಿ ಆರೋಗ್ಯ ತಪಾಸಣೆಗೊಳಪಟ್ಟಿದ್ದಾರೆ. ಆದರೆ, ಈ ಪ್ರಕರಣ ಎಲ್ಲೋ ಹಾದಿ ತಪ್ಪುವ ಭೀತಿ ದಲಿತ ಪರ ಸಂಘಟನೆ ಹಾಗೂ ಪ್ರಗತಿಪರರ ಒಕ್ಕೂಟಕ್ಕೆ ಕಾಡುತ್ತಿದ್ದರಿಂದ ಈ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಪಟ್ಟು ಹಿಡಿಯಲಾಗಿದೆ.
ಅಲ್ಲದೆ, ಪ್ರಗತಿಪರರ ಸಂಘಟನೆಗಳ ಒಕ್ಕೂಟದಿಂದ ದಾವಣಗೆರೆಯ ಅಂಬೇಡ್ಕರ್ ವೃತ್ತದಿಂದ ಮುರುಘಾ ಶ್ರೀಯವರ ವಿರುದ್ಧ ದಾಖಲಾಗಿರುವ ಫೋಕ್ಸೊ ಹಾಗು ಅಟ್ರಾಸಿಟಿ ಕಾಯ್ದೆಯ ಪ್ರಕರಣದ ರುವಾರಿಯಾಗಿರುವ ಶ್ರೀಯವರ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಸರ್ಕಾರಕ್ಕೆ ಮನವಿ ಮಾಡಲಾಯಿತು. ಇನ್ನು ಬಸವಪ್ರಭು ನೇತೃತ್ವದಲ್ಲಿ ಮುರುಘಾ ಶ್ರೀ ಅವರನ್ನು ಬಂಧಿಸಿದಕ್ಕಾಗಿ ಖಂಡಿಸಿ ಪ್ರತಿಭಟನೆ ನಡೆಸಿ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದರು.
ಪ್ರಗತಿಪರರ ವಾದ ಏನು?: ಮುರುಘಾ ಶರಣರಿಗೆ ಸರ್ಕಾರ ಹಾಗೂ ಸ್ವಾಮೀಜಿಗಳು ನೀಡಿದ ಬೆಂಬಲದಿಂದ ಸಾಕಷ್ಟು ನೋವು ತಂದಿದೆ. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಬ್ಬರಿಗೆ ಒಂದು ನ್ಯಾಯನಾ, ಫೋಕ್ಸೋ ಕಾಯಿದೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಸಾಕ್ಷ್ಯ ನಾಶಪಡಿಸಿದವರ ವಿರುದ್ಧ ತನಿಖೆ ಆಗಬೇಕು . ಶ್ರೀಯವರು ಆರೋಗ್ಯವಾಗಿದ್ದಾರೆ. ಆದ್ರೆ ಇದರಿಂದ ತಪ್ಪಿಸಿಕೊಳ್ಳಲು ನಾಟಕವಾಡ್ತಿದ್ದಾರೆ. ಹಾಗೂ ಮುರುಘಾ ಶ್ರೀ ನೀಡಿರುವ ಬಸವ ಪ್ರಶಸ್ತಿಗಳನ್ನು ಪ್ರಶಸ್ತಿ ಪುರಸ್ಕೃತರು ವಾಪಾಸ್ ಮಾಡಬೇಕು ಎಂದು ಪ್ರಗತಿಪರ ವಕೀಲ ಗುಮ್ಮನೂರು ಮಲ್ಲಿಕಾರ್ಜುನ ಒತ್ತಾಯಿಸಿದರು.
ಶ್ರೀಯವರು ಹಾಲಿನಂತೆ ಪರಿಶುದ್ಧವಾಗಿದ್ದಾರೆ: ಇತಿಹಾಸದಲ್ಲಿ ಕಳೆದ ದಿನ ದುಃಖವಾದ ದಿನವಾಗಿದೆ. ಯಾರು ಸಮಾನತೆಗಾಗಿ, ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡ್ತಾರೋ ಅಂತವರನ್ನು ದುಷ್ಟರು ಕಾಡಿದ್ದಾರೆ. ದುಷ್ಟರು ಬಸವಣ್ಣ ಅವರನ್ನು ಕೂಡ ಕಾಡಿದ್ದಾರೆ. ನಮ್ಮ ಶ್ರೀಯವರು ದೋಷಮುಕ್ತರಾಗಿ ವಾಪಸ್ ಮಠಕ್ಕೆ ಬರ್ತಾರೆ. ಇನ್ನು ನಮ್ಮ ಮುರುಘಾ ಶ್ರೀಯವರು ಹಾಲಿನಂತೆ ಪರಿಶುದ್ಧವಾಗಿದ್ದಾರೆ.
ಹಣ ಸಂಪಾದನೆ ಹಾಗೂ ಮಠದಲ್ಲಿ ಅಧಿಕಾರ ಹಿಡಿಯಬೇಕೆಂಬ ಉದ್ದೇಶದಿಂದ ಈ ರೀತಿ ಮಸಲತ್ತು ಮಾಡಿದ್ದಾರೆ. ನಮ್ಮ ಶ್ರೀಯವರ ಮೇಲೆ ಆರೋಪ ಹೊರಿಸಿದ್ದಾರೆ. ಅವರು ದೋಷಮುಕ್ತರಾಗಿ ಬರ್ತಾರೆ ಎಂದು ದಾವಣಗೆರೆಯ ಶಾಖಮಠದ ಬಸವ ಪ್ರಭು ಶ್ರೀ ಅಭಿಪ್ರಾಯ ವ್ಯಕ್ತಪಡಿಸಿದರು.
ಓದಿ: 'ಮುರುಘಾ ಶರಣರ ವಿರುದ್ಧ ಕಾನೂನು ಕ್ರಮ ಜರುಗಿಸಿ': ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ