ದಾವಣಗೆರೆ : ದಕ್ಷಿಣ ದಾವಣಗೆರೆಯಲ್ಲಿ ಪ್ರಭಾವಶಾಲಿ ರಾಜಕಾರಣಿಯಾಗಿರುವ ಮಾಜಿ ಸಚಿವ, ಹಾಲಿ ಶಾಸಕ ಶಾಮನೂರು ಶಿವಶಂಕರಪ್ಪನವರು ತಮ್ಮ 92ರ ಇಳಿವಯಸ್ಸಿನಲ್ಲೂ ಚುನಾವಣೆಯಲ್ಲಿ ಈ ಬಾರಿ ಮತ್ತೆ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸುವುದಾಗಿಯೂ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇತ್ತ ಅವರ ಪುತ್ರ ಮಾಜಿ ಸಚಿವ ಎಸ್ಎಸ್ ಮಲ್ಲಿಕಾರ್ಜುನ್ ಮತ್ತೆ ಇದೇ ಮೊದಲ ಬಾರಿಗೆ ವಿಧಾನಸಭೆ ಚುನಾವಣೆಯಲ್ಲಿ ದಾವಣಗೆರೆ ಉತ್ತರ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ. ಬಿಜೆಪಿ ಭ್ರಷ್ಟಾಚಾರದ ವಿರುದ್ಧ ಕಿಡಿಕಾರಿರುವ ಅಪ್ಪ-ಮಗ ಕಾಂಗ್ರೆಸ್ನ ಹೆಚ್ಚಿನ ಸೀಟು ಗೆಲ್ಲಿಸಲು ತಮ್ಮದೇ ರಣತಂತ್ರ ರೂಪಿಸುತ್ತಿದ್ದಾರೆ ಎನ್ನಲಾಗುತ್ತಿದೆ.
ದಾವಣಗೆರೆ ಜಿಲ್ಲೆಯಲ್ಲಿ ಕಾಂಗ್ರೆಸ್ ಎಂದರೆ ಶಾಮನೂರು ಶಿವಶಂಕರಪ್ಪ ಮತ್ತು ಅವರ ಮಗ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅಂದುಕೊಂಡರೆ ತಪ್ಪಲ್ಲ. ಕಾಂಗ್ರೆಸ್ ತನ್ನ ಅಸ್ತಿತ್ವವನ್ನು ಈ ಅಪ್ಪ ಮಕ್ಕಳನ್ನು ಹೊರತಾಗಿ ಇಲ್ಲಿ ಊಹಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಇಂತಹ ಪರಿಸ್ಥಿತಿ ಜಿಲ್ಲೆಯಲ್ಲಿದೆ.
ಕಾಂಗ್ರೆಸ್ ಪ್ರಜಾ ಧ್ವನಿ ಯಾತ್ರೆ: ದಾವಣಗೆರೆ ಜಿಲ್ಲೆಗೆ ಇದೇ ಜನವರಿ 19 ರಂದು ಪ್ರಜಾಧ್ವನಿ ಯಾತ್ರೆ ಆಗಮಿಸಲಿದೆ. ಇದರ ಬೆನ್ನಲ್ಲೇ ಕೆಪಿಸಿಸಿ ನಾಯಕರ ಆಹ್ವಾನಕ್ಕೆ ಎಸ್.ಎಸ್.ಮಲ್ಲಿಕಾರ್ಜುನ್ ಸಭೆ ನಡೆಸಿ ಕಾರ್ಯಕ್ರಮದ ರೂಪುರೇಷೆ ತಯಾರಿಸಿದ್ದಾರೆ. ಕನಿಷ್ಠ 1 ಲಕ್ಷ ಜನರನ್ನು ಸೇರಿಸಿ ಪ್ರಜಾಧ್ವನಿಯಾತ್ರೆ ಯಶಸ್ವಿ ಮಾಡಬೇಕೆಂದು ಜಿಲ್ಲೆಯ 7 ಕ್ಷೇತ್ರದ 45 ಆಕಾಂಕ್ಷಿತ ಅಭ್ಯರ್ಥಿಗಳನ್ನು ಒಟ್ಟುಗೂಡಿಸಿ ಜನರನ್ನು ಕರೆತರುವ ಬಗ್ಗೆ ಚರ್ಚಿಸಿದ್ದಾರೆ.
ಇದೇ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಂಜಪ್ಪ, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಶಾಮನೂರು ಹಾಗು ಉತ್ತರದಿಂದ ಎಸ್ಎಸ್ ಮಲ್ಲಿಕಾರ್ಜುನ್ ಸ್ಪರ್ಧಿಸಲಿದ್ದಾರೆ. ಅವರ ಸ್ಪರ್ಧೆ ಬಗ್ಗೆ ನಿಮಗೇಕೆ ಅನುಮಾನ? ಇಬ್ಬರ ಸ್ಪರ್ಧೆ ಮತ್ತು ಗೆಲುವು ಖಚಿತ ಎಂದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಎಸ್.ಎಸ್.ಮಲ್ಲಿಕಾರ್ಜುನ್, ದಾವಣಗೆರೆ ಉತ್ತರದಿಂದ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಸುಳಿವು ನೀಡಿದರು. ಕಳೆದ ಬಾರಿ ವಿಧಾನಸಭೆ ಚುನಾವಣೆ ಸೋಲಿನ ನಂತರ ಕಾಂಗ್ರೆಸ್ ಸಂಸದರ ಚುನಾವಣೆಯಲ್ಲೂ ಸ್ಪರ್ಧಿಸದೆ ಹಿಂದೆ ಸರಿದಿದ್ದ ಮಲ್ಲಿಕಾರ್ಜುನ್ ತನ್ನ ಸ್ಪರ್ಧೆಯ ಬಗ್ಗೆ ಮೌನವಹಿಸಿದ್ದರು.
ಕಳೆದ ಎರಡು ವಾರಗಳ ಹಿಂದೆ ಅಕ್ರಮವಾಗಿ ವನ್ಯಜೀವಿಗಳನ್ನು ಸಾಕಿದ್ದರು ಎಂಬ ಆರೋಪದಲ್ಲಿ ಜಾಮೀನು ಪಡೆದಿರುವ ಎಸ್.ಎಸ್.ಮಲ್ಲಿಕಾರ್ಜುನ್ ಮತ್ತೆ ಪ್ರಮುಖ ವೇದಿಕೆಗಳಲ್ಲಿ ಕಾಣಿಸಿಕೊಂಡು ಈ ಬಾರಿ ಚುನಾವಣೆಯಲ್ಲಿ ಗೆಲುವು ಸಾಧಿಸಲು ತನ್ನದೇ ರಣತಂತ್ರ ರೂಪಿಸುತ್ತಿದ್ದಾರೆ. ಬಿಜೆಪಿ ಪಾಪದ ಕೊಡ ತುಂಬಿದ್ದು, ಇದನ್ನು ಜನತೆಗೆ ತಿಳಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಅವರು ಹೇಳಿದರು.
ಬಿಜೆಪಿ ವಿರುದ ವಾಗ್ದಾಳಿ: ಇದೇ ವೇಳೆ ನೇರವಾಗಿ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ ಮಲ್ಲಿಕಾರ್ಜುನ್, ಬಿಜೆಪಿ ಸರ್ಕಾರದ ಹಗರಣಗಳು ಒಂದಲ್ಲ ಎರಡಲ್ಲ ಸಾವಿರಾರು ಹಗರಣಗಳು ಬೆಳಕಿಗೆ ಬರುತ್ತವೆ. ದಾವಣಗೆರೆ ಉತ್ತರ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ತಿಳಿಸಿದ ಅವರು ದಾವಣಗೆರೆಯಲ್ಲೂ ಕಮಿಷನ್ ದಂಧೆ ಹೆಚ್ಚಾಗಿದ್ದು, ಕಮಿಷನ್ ವಿಚಾರ ಮಾತನಾಡಿದರೆ ಯಾವುದಾದರೂ ನೆಪ ಹುಡುಕಿ ಜೈಲಿಗೆ ಕಳಿಸುವ ಹಾಗೂ ಹೆದರಿಸುವ ಉದ್ದೇಶ ಬಿಜೆಪಿ ನಾಯಕರದ್ದು ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಅಲೆ ಇದೆ ಎಂದು ಹೇಳುವ ಮೂಲಕ ಪಕ್ಷದ ಕಾರ್ಯಕರ್ತರಲ್ಲಿ ಹುರುಪು ತುಂಬಿ ದಾವಣಗೆರೆ ಬಿಜೆಪಿ ಭದ್ರ ಕೋಟೆಯಲ್ಲಿ ಮತ್ತೊಮ್ಮೆ ಕೈ ಪಾರುಪತ್ಯೆ ಸ್ಥಾಪಿಸಲು ಅಪ್ಪ ಮಕ್ಕಳು ಯೋಜನೆ ರೂಪಿಸುತ್ತಿದ್ದಾರೆ. ಟಿಕೆಟ್ ಆಕಾಂಕ್ಷಿಗಳು ಹೈಕಮಾಂಡ್ಗೂ ಮೊದಲು ಶಾಮನೂರು ಕುಟುಂಬದ ವಿಶ್ವಾಸ ಗಳಿಸಲು ನಾ ಮುಂದು ತಾ ಮುಂದೆ ಎಂದು ದುಂಬಾಲು ಬಿದ್ದಿದ್ದಾರೆ. ಪ್ರಜಾಧ್ವನಿಯಾತ್ರೆಗೆ ಹೆಚ್ಚಿನ ಸಂಖ್ಯೆಯ ಕಾರ್ಯಕರ್ತರನ್ನು ಕರೆತರಲು ಶಕ್ತಿ ಪ್ರದರ್ಶನಕ್ಕೂ ಮುಂದಾಗಿದ್ದಾರೆ.
ಇದನ್ನೂ ಓದಿ: ಬಿಜೆಪಿಯವರು ಎತ್ತು, ಎಮ್ಮೆ, ಹಸು ಸಾಕಿದ್ದಾರಾ?: ಶಾಮನೂರು ಶಿವಶಂಕರಪ್ಪ ಪ್ರಶ್ನೆ