ದಾವಣಗೆರೆ : ಮುಖ್ಯಮಂತ್ರಿಯಿಂದ ಪ್ರಧಾನಮಂತ್ರಿಯವರೆಗೆ ಒಂದೇ ಒಂದು ರೂಪಾಯಿ ಭ್ರಷ್ಟಾಚಾರದ ಆರೋಪವಿಲ್ಲ. ನಮ್ಮ ಸರ್ಕಾರಗಳು ಕಳಂಕ ರಹಿತ ಸರ್ಕಾರಗಳೆಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ತಿಳಿಸಿದರು.
ನಗರದಲ್ಲಿ ಮಾತನಾಡಿದ ಅವರು, ಮೂರು ಮಹಾನಗರ ಪಾಲಿಕೆಗಳಲ್ಲಿ ಬಿಜೆಪಿ ಅಧಿಕಾರ ನಡೆಸಲಿದೆ. ಯಡಿಯೂರಪ್ಪ ಅವರ ಕಾರ್ಯಕ್ರಮಗಳನ್ನ ಈಗಿನ ಸಿಎಂ ಮುಂದುವರೆಸುತ್ತಿದ್ದಾರೆ. ಬಿಎಸ್ವೈ ನೇತೃತ್ವದಲ್ಲಿ ಈ ಹಿಂದೆ ನಡೆದ ಎಲ್ಲಾ ಚುನಾವಣೆಗಳಲ್ಲಿ ನಾವು ಗೆದ್ದಿದ್ದೇವೆ. ಈ ಕಾರ್ಯಕಾರಿಣಿಯಲ್ಲಿ ನಾವು ಬೊಮ್ಮಾಯಿ ಹಾಗೂ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಉಪಚುನಾವಣೆ ಗೆಲ್ಲುತ್ತೇವೆ ಎಂದರು.
ಜಿಲ್ಲಾ ಪಂಚಾಯತ್ ಚುನಾವಣೆ ಹಾಗೂ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶ ಅಭಿವೃದ್ಧಿಯತ್ತ ಸಾಗುತ್ತಿದೆ. ಪ್ರಧಾನಿಗಳ ಜನ್ಮದಿನಾಚರಣೆಗೆ ನಾವು ಕೇಕ್ ಕಟ್ ಮಾಡಲಿಲ್ಲ.
ಬಡವರ ಸೇವೆ ಮಾಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿದ್ದೇವೆ. ಪ್ರಧಾನಿಗಳ ನೇತೃತ್ವದಲ್ಲಿ ನಡೆದ ಎಲ್ಲಾ ಚುನಾವಣೆಗಳನ್ನ ಗೆದ್ದಿದ್ದೇವೆ. ಜನರು ಮೋದಿಯವರ ಮೇಲೆ ವಿಶ್ವಾಸವಿಟ್ಟಿದ್ದಾರೆ ಎಂದು ತಿಳಿಸಿದರು.
60 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಕುಡಿಯುವ ನೀರು ಕೊಡಲಿಲ್ಲ..
ಅರವತ್ತು ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷದವರು ಬಡವರಿಗೆ ಶುದ್ಧ ಕುಡಿಯುವ ನೀರು, ಆರೋಗ್ಯ, ಶಿಕ್ಷಣ ಕೊಡಲು ಸಾಧ್ಯವಾಗಲಿಲ್ಲ. ಆದ್ದರಿಂದ ದೇಶದ ರೈತರು, ಕಾರ್ಮಿಕರು, ಬಡವರು ಪ್ರಧಾನಿ ಮೋದಿ ಹಾಗೂ ಬಿಜೆಪಿ ಪಕ್ಷದ ಜೊತೆಗೆ ನಿಂತಿದ್ದಾರೆ.
ನಮ್ಮನ್ನು ರಕ್ಷಿಸಲು ಬಿಜೆಪಿಯಿಂದ ಮಾತ್ರ ಸಾಧ್ಯ ಎಂಬುದು ದೇಶದ ಜನರಿಗೆ ಅರ್ಥವಾಗಿದೆ ಎಂದು ತಿಳಿಸಿದರು. ಒಂದೇ ದಿನಕ್ಕೆ 2 ಕೋಟಿ 30 ಲಕ್ಷ ಜನರಿಗೆ ಕೋವಿಡ್ ವ್ಯಾಕ್ಸಿನ್ ಹಾಕಲಾಗಿದೆ. ಇದನ್ನು ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಅವರು ಅಪಹಾಸ್ಯ ಮಾಡ್ತಿದ್ರು ಎಂದರು.
ಓದಿ: ನನ್ನ ಸರ್ಕಾರ ಇಂತಹ ಘಟನೆಗಳನ್ನು ಕಬ್ಬಿಣದ ಕೈಯಿಂದ ವ್ಯವಹರಿಸುತ್ತದೆ.. ಸಿಎಂ ಬೊಮ್ಮಾಯಿ ಖಡಕ್ ಎಚ್ಚರಿಕೆ