ದಾವಣಗೆರೆ: ದಾಯಾದಿ ಕಲಹ ಹಿನ್ನೆಲೆಯಲ್ಲಿ ತಮ್ಮನ ಪತ್ನಿ ಕೊಂದಿದ್ದ ಆರೋಪಿಯನ್ನು ಗ್ರಾಮಾಂತರ ಪೊಲೀಸರು ಬಂಧಿಸಿದ್ದು, ಹತ್ಯೆಗೀಡಾಗಿದ್ದ ಮಹಿಳೆಯ ಕುತ್ತಿಗೆಯಲ್ಲಿದ್ದ ಮಾಂಗಲ್ಯ ಹಾಗೂ ಚಿನ್ನದ ಸರ ವಶಪಡಿಸಿಕೊಂಡಿದ್ದಾರೆ. ಇನ್ನು ಈ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸ್ ಡಾಗ್ 'ತುಂಗಾ' ಮಹತ್ವದ ಪಾತ್ರ ವಹಿಸಿದೆ.
ಹೂವಿನಮಡು ಗ್ರಾಮದ ಕರಿಬಸಪ್ಪ ಹತ್ಯೆ ಮಾಡಿದ ಆರೋಪಿ. ಈತನ ತಮ್ಮ ರುದ್ರೇಶ್ ಪತ್ನಿ ನೀಲಮ್ಮ ಹತ್ಯೆಗೀಡಾದ ಮಹಿಳೆ. ಅಣ್ಣ ತಮ್ಮಂದಿರ ನಡುವಿನ ಜಗಳವೇ ಕೊಲೆಗೆ ಕಾರಣ ಎಂದು ಎಸ್ಪಿ ಹನುಮಂತರಾಯ ತಿಳಿಸಿದ್ದಾರೆ.
ಘಟನೆಯ ಹಿನ್ನೆಲೆ ಏನು...?
ಕಳೆದ ಸೆಪ್ಟಂಬರ್ 1 ರಂದು ತಾಲೂಕಿನ ಹೂವಿನಮಡು ಗ್ರಾಮದಲ್ಲಿ ನೀಲಮ್ಮ ಮೆಕ್ಕೆಜೋಳ ಬೆಳೆದಿದ್ದ ತೆಂಗಿನ ತೋಟಕ್ಕೆ ಕಾಯಿ ಆರಿಸಿಕೊಂಡು ಬರಲು ಹೋಗಿದ್ದರು. ರಾತ್ರಿಯಾದರೂ ಮನೆಗೆ ನೀಲಮ್ಮ ಬಂದಿರಲಿಲ್ಲ. ಎಲ್ಲಿ ಹುಡುಕಿದರೂ ಪತ್ತೆ ಆಗಲಿಲ್ಲ. ಬಳಿಕ ಆಕೆಯ ಪತಿ ತೋಟಕ್ಕೆ ಬಂದಾಗ ಅಲ್ಲಿ ನೀಲಮ್ಮನ ಶವ ಪತ್ತೆಯಾಗಿತ್ತು. ಪೊಲೀಸರಿಗೆ ದಾಯಾದಿ ಕಲಹದ ಬಗ್ಗೆ ಮಾಹಿತಿ ನೀಡಿದ್ದರು. ನೀಲಮ್ಮ ಒಬ್ಬರೇ ತೋಟದಲ್ಲಿ ಇದ್ದದ್ದನ್ನು ಕರಿಬಸಪ್ಪ ಗಮನಿಸಿದ್ದ. ಬಹಳ ದಿನಗಳಿಂದ ಅಣ್ಣ-ತಮ್ಮನ ನಡುವೆ ಗಲಾಟೆ ಆಗುತಿತ್ತು. ಇದನ್ನೇ ಮನಸ್ಸಿನಲ್ಲಿಟ್ಟುಕೊಂಡಿದ್ದ ಕರಿಬಸಪ್ಪ, ತೋಟಕ್ಕೆ ಬಂದು ನೀಲಮ್ಮಳ ಕುತ್ತಿಗೆಗೆ ಆಕೆಯ ಸೀರೆಯ ಸೆರಗಿನಿಂದ ಬಿಗಿದು ಕೊಲೆ ಮಾಡಿ ಪರಾರಿಯಾಗಿದ್ದ. ಪೊಲೀಸರ ದಿಕ್ಕು ತಪ್ಪಿಸಲು ಮಹಿಳೆಯ ಕುತ್ತಿಗೆಯಲ್ಲಿದ್ದ ಮಾಂಗಲ್ಯ ಹಾಗೂ ಬಂಗಾರದ ಸರ ಕಿತ್ತುಕೊಂಡು ಪರಾರಿಯಾಗಿದ್ದ.
ಈ ಬಗ್ಗೆ ಆರೋಪಿಯು ವಿಚಾರಣೆ ವೇಳೆ ಸತ್ಯ ಬಾಯಿಬಿಟ್ಟಿದ್ದಾನೆ. ಸೂಳೆಕೆರೆ ಗುಡ್ಡದಲ್ಲಿ ಯುವಕನ ಕೊಲೆ ಪ್ರಕರಣದ ಆರೋಪಿಗಳ ಬಂಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ 'ತುಂಗಾ' ಹೆಸರಿನ ಪೊಲೀಸ್ ಶ್ವಾನ ಈ ಪ್ರಕರಣದಲ್ಲಿ ನೆರವಾಗಿದೆ ಎಂದು ಎಸ್ಪಿ ಮಾಹಿತಿ ನೀಡಿದರು.