ದಾವಣಗೆರೆ: ಬಾನೆತ್ತರ ಬೆಳೆದು ನಿಂತಿದ್ದ ಅಡಿಕೆ ಮರಗಳನ್ನು ದುಷ್ಕರ್ಮಿಗಳು ಕಡಿದು ಹಾಕಿರುವ ಘಟನೆ ಚನ್ನಗಿರಿ ತಾಲೂಕಿನ ಹಿರೇಕೊಗಲೂರು ಗ್ರಾಮದಲ್ಲಿ ನಡೆದಿದೆ. ರೈತ ಹಾಗೂ ಹಿರೇಕೊಗಲೂರು ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷ ರುದ್ರೇಶ ಎನ್ನುವರಿಗೆ ಸೇರಿದ ಅಡಿಕೆ ತೋಟ ಇದಾಗಿದ್ದು, ಹತ್ತು ವರ್ಷಗಳಿಂದ ಹಿಂದೆ ನೆಡಲಾಗಿದ್ದ 50ಕ್ಕೂ ಹೆಚ್ಚು ಮರಗಳನ್ನು ಕಡಿದು ಹಾಕಲಾಗಿದೆ.
ರುದ್ರೇಶ ಎಂಬವರ ಸಂಬಂಧಿಗಳಾದ ಮಂಜಪ್ಪ, ಮಂಜಮ್ಮ, ರಂಗಸ್ವಾಮಿ, ದರ್ಶನ್, ನರಸಿಂಹ, ಕರಿಯಪ್ಪ ಎನ್ನುವವರ ಮೇಲೆ ಅನುಮಾನ ವ್ಯಕ್ತಪಡಿಸಿರುವ ಮಾಲೀಕರು, ಈ ಸಂಬಂಧ ಸಂತೆಬೆನ್ನೂರು ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಈ ಘಟನೆಯ ಕುರಿತಾಗಿ ದೂರು ನೀಡಿದರೂ ಪೊಲೀಸರು ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಆರೋಪಿಸಿರುವ ರುದ್ರೇಶ್ ಸಂತೆಬೆನ್ನೂರು ಠಾಣೆ ಪೊಲೀಸರ ವಿರುದ್ಧ ಎಸ್ಪಿಗೆ ದೂರು ನೀಡಲು ನಿರ್ಧರಿಸಿದ್ದಾರೆ.
ರಾಜಕೀಯ ಹಾಗೂ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಈ ಕೃತ್ಯ ಎಸಗಿದ್ದಾರೆ. ನಮಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಮಳೆಯಿಲ್ಲದೇ ಒಣಗಿದ 12 ಎಕರೆ ಮೆಕ್ಕೆಜೋಳ: ಬೆಳೆ ನಾಶಪಡಿಸಿ ರೈತನ ಹತಾಶೆ