ದಾವಣಗೆರೆ: ಶಾಸಕ ಎಂ ಪಿ ರೇಣುಕಾಚಾರ್ಯ ಸಹೋದರನ ಪುತ್ರನ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಕಳುಹಿಸಿಕೊಟ್ಟ ಕಾಲೇಜಿನ ಪ್ರಾಂಶುಪಾಲರನ್ನು ಭ್ರಷ್ಟಾಚಾರ ವಿರೋಧಿ ವೇದಿಕೆ ಮುಖಂಡ ದೂರವಾಣಿ ಕರೆ ಮೂಲಕ ತರಾಟೆಗೆ ತೆಗೆದುಕೊಂಡಿದ್ದಾರೆ.
ಜಿಲ್ಲೆಯ ಹೊನ್ನಾಳಿ ಪಟ್ಟಣದ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲ ಶಿವಬಸಪ್ಪ ಎತ್ತಿನಹಳ್ಳಿ ವಿರುದ್ಧ ಕರ್ತವ್ಯಲೋಪದ ಆರೋಪ ಕೇಳಿಬಂದಿದೆ. ಕಳೆದೆರಡು ದಿನಗಳ ಹಿಂದೆ ಹೊನ್ನಾಳಿಯಲ್ಲಿ ನಡೆದ ಶಾಸಕ ಎಂ ಪಿ ರೇಣುಕಾಚಾರ್ಯ ಸಹೋದರನ ಪುತ್ರನ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಪದವಿ ಕಾಲೇಜಿನ ವಿದ್ಯಾರ್ಥಿಗಳನ್ನು ಹಾಡುಗಳನ್ನು ಹಾಡಲು ಕಳುಹಿಸಿಕೊಟ್ಟಿದ್ದರು.
ಪ್ರಾಂಶುಪಾಲರ ನಡೆಯಿಂದ ಭ್ರಷ್ಟಾಚಾರದ ವಿರೋಧಿ ವೇದಿಕೆ ಮುಖಂಡ ಗುರುಪಾದಯ್ಯ ಮಠದ್ ದೂರವಾಣಿ ಕರೆ ಮಾಡಿ ಪ್ರಾಂಶುಪಾಲರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಆ ಆಡಿಯೋ ಇದೀಗ ಈಟಿವಿ ಭಾರತಕ್ಕೆ ಲಭ್ಯವಾಗಿದೆ. ಖಾಸಗಿ ಕಾರ್ಯಕ್ರಮಕ್ಕೆ ನೀವು ಹೇಗೆ ವಿದ್ಯಾರ್ಥಿಗಳನ್ನು ಕಳುಹಿಸಿಕೊಟ್ಟಿರಿ ಎಂದು ಗುರುಪಾದಯ್ಯ ಮಠದ್ ಪ್ರಾಂಶುಪಾಲರನ್ನು ಪ್ರಶ್ನಿಸಿದ್ದಾರೆ.
ಪ್ರಾಂಶುಪಾಲರಿಂದ ನಿರುತ್ತರ: ನಮ್ಮ ಮನೆಯಲ್ಲೂ ಕಾರ್ಯಕ್ರಮ ಇದೆ. ಆ ಕಾರ್ಯಕ್ರಮಕ್ಕೂ ವಿದ್ಯಾರ್ಥಿಗಳನ್ನು ಕಳುಹಿಸಿಕೊಡಿ ಎಂದಿದ್ದಾರೆ. ಇನ್ನು, ನೀವು ಕಾಲೇಜಿನ ಪ್ರಾಂಶುಪಾಲರಾಗಿದ್ದು, ನಿಮಗೆ ಜವಾಬ್ದಾರಿ ಇಲ್ಲವೇ? ಶಾಸಕ ರೇಣುಕಾಚಾರ್ಯ ಹೇಳಿದಂಗೆ ನೀವು ಕೇಳೋದಾದ್ರೆ ನಮ್ಮ ಮನೆ ಕಾರ್ಯಕ್ರಮಕ್ಕೂ ವಿದ್ಯಾರ್ಥಿಗಳನ್ನು ಕಳುಹಿಸಿಕೊಡಿ ಎಂಬ ಸಾರ್ವಜನಿಕರ ಪ್ರಶ್ನೆಗೆ ಪ್ರಾಂಶುಪಾಲರು ನಿರುತ್ತರರಾಗಿದ್ದಾರೆ.
ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ: ಅದೇ ದೂರವಾಣಿ ಕರೆಯಲ್ಲಿ ಇದನ್ನು ದೊಡ್ಡದು ಮಾಡಬೇಡಿ ಎಂದು ಪ್ರಾಂಶುಪಾಲರು ಮನವಿ ಮಾಡಿದ್ದಾರೆ. ಇನ್ನು, ದೂರವಾಣಿಯಲ್ಲಿ ಈಟಿವಿ ಭಾರತ್ದೊಂದಿಗೆ ಮಾತನಾಡಿದ ಗುರುಪಾದಯ್ಯ ಮಠದ್ ಅವರು, ಇರುವ ವಿಚಾರದ ಬಗ್ಗೆ ಪ್ರಾಂಶುಪಾಲರನ್ನು ಕೇಳಿದ್ದೇವೆ. ವಿದ್ಯಾರ್ಥಿಗಳನ್ನು ಶಾಸಕರ ಖಾಸಗಿ ಕಾರ್ಯಕ್ರಮಕ್ಕೆ ಕಳುಹಿಸಿದ್ದು ತಪ್ಪು. ಇದು ಮರುಕಳಿಸಬಾರದು. ಈ ವಿಚಾರವನ್ನು ದೊಡ್ಡದು ಮಾಡ್ಬೇಡಿ ಎಂದು ಪ್ರಾಂಶುಪಾಲರು ಕೇಳಿಕೊಂಡಿದ್ದಾರೆ. ಆದರೂ ಇದಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡುತ್ತೇವೆ. ಪ್ರಾಂಶುಪಾಲರ ಮೇಲೆ ಕ್ರಮ ಜರುಗಿಸುವಂತೆ ಮಾಡುತ್ತೇವೆ ಎಂದರು.
ಓದಿ: ಚಂದ್ರು ಸಾವು ಪ್ರಕರಣ.. ಮನೆಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ ಸಿಐಡಿ : ರೇಣುಕಾಚಾರ್ಯ