ದಾವಣಗೆರೆ: ಮಾಹಾಮಾರಿ ಕೊರೊನಾಗೆ ದಾವಣಗೆರೆಯಲ್ಲಿ 83 ವರ್ಷದ ವೃದ್ಧೆಯೊಬ್ಬಳು ಬಲಿಯಾಗಿದ್ದು, ಮೃತರ ಸಂಖ್ಯೆ 6ಕ್ಕೇರಿದೆ. ಮೃತ ವೃದ್ಧೆ ದೇವರಬೆಳಕೆರೆ ಗ್ರಾಮದಲ್ಲಿ ಕಳೆದ ಎರಡು ತಿಂಗಳಿಂದ ತನ್ನ ಹಿರಿಯ ಪುತ್ರನ ಮನೆಯಲ್ಲಿದ್ದರು. ಆಶಾ ಕಾರ್ಯಕರ್ತೆಯರು ಮನೆಗೆ ತೆರಳಿದ್ದ ವೇಳೆ ವೃದ್ಧೆ ಉಸಿರಾಟ ಸಮಸ್ಯೆ, ಜ್ವರ ಸೇರಿದಂತೆ ಅಸ್ವಸ್ಥತತೆಯಿಂದ ಬಳಲುತ್ತಿದ್ದದ್ದು ಕಂಡು ಬಂದಿತ್ತು.
ಕೂಡಲೇ ಕೋವಿಡ್ ಜಿಲ್ಲಾಸ್ಪತ್ರೆಗೆ ಸೇರಿಸುವಂತೆ ಸೂಚಿಸಿದ್ದರು. ಆದರೆ, ವೃದ್ಧೆಯ ಕಿರಿಯ ಪುತ್ರ ಬಸವರಾಜಪೇಟೆಗೆ ಕರೆದುಕೊಂಡು ಹೋಗಿದ್ದರು. ಬಳಿಕ ಆ್ಯಂಬ್ಯುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಬುಧವಾರ ವೃದ್ಧೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಗುರುವಾರ ಆಕೆಯ ಗಂಟಲು ದ್ರವ ಪರೀಕ್ಷಾ ವರದಿ ಬಂದಿದ್ದು, ಕೊರೊನಾ ಪಾಸಿಟಿವ್ ದೃಢಪಟ್ಟಿದೆ.
ಈ ಕುರಿತು ಮಾತನಾಡಿದ ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ, ಜಿಲ್ಲಾಸ್ಪತ್ರೆಯಲ್ಲಿ ಕೊರೊನಾ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದ 8 ತಿಂಗಳ ಮಗು ಸೇರಿದಂತೆ ಏಳು ಮಂದಿ ಗುಣಮುಖರಾಗಿದ್ದು, ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಇಲ್ಲಿಯವರೆಗೆ 141 ಮಂದಿ ಸೋಂಕಿನಿಂದ ಮುಕ್ತರಾಗಿ ಡಿಸ್ಚಾರ್ಜ್ ಆದಂತಾಗಿದೆ. ಇದುವರೆಗೆ ಒಟ್ಟು 9,319 ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿದ್ದು, 8,772 ಮಂದಿಯದ್ದು ನೆಗೆಟಿವ್ ಬಂದಿದೆ. ಇನ್ನು 468 ಫಲಿತಾಂಶಗಳು ಬರಬೇಕಿದೆ ಎಂದು ಮಾಹಿತಿ ನೀಡಿದರು.