ದಾವಣಗೆರೆ : ಶಾಲೆಯ ಶೌಚಾಲಯ ನಿರ್ಮಾಣಕ್ಕೆ ಬಿಡುಗಡೆಯಾದ ಅನುದಾನವನ್ನು ಗ್ರಾಮ ಪಂಚಾಯತಿಯವರು ಬೇರೊಂದು ಕಾಮಗಾರಿಗೆ ಬಳಕೆ ಮಾಡುತ್ತಿದ್ದಾರೆ ಎಂಬ ಅರೋಪ ಕೇಳಿ ಬಂದಿದೆ. ಜಿಲ್ಲೆಯ ಹೊನ್ನಾಳಿ ತಾಲೂಕಿನ ಬೇಲಿಮಲ್ಲೂರು ಗ್ರಾಮದಲ್ಲಿರುವ ಸರ್ಕಾರಿ ಶಾಲೆಯ ಶೌಚಾಲಯ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದ್ದು, ಅದನ್ನು ಬೇರೊಂದು ಕಾಮಗಾರಿಗೆ ಬಳಕೆ ಮಾಡಿ ಮಕ್ಕಳಿಗೆ ಶೌಚಾಲಯ ಇಲ್ಲದಂತಾಗಿದೆ. ಇದರಿಂದ ಮಕ್ಕಳು ಶೌಚಕ್ಕಾಗಿ ಹೊರಹೋಗುವ ಪರಿಸ್ಥಿತಿ ನಿರ್ಮಾಣ ಆಗಿದೆ.
ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಸಲುವಾಗಿ ಸರ್ಕಾರ ಅನುದಾನ ಬಿಡುಗಡೆ ಮಾಡುತ್ತಿದೆ. ಅದರೇ ಅನುದಾನ ಬಿಡುಗಡೆಯಾದರು ಕೂಡ ಬೇಲಿಮಲ್ಲೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಕಾಮಗಾರಿ ಅರ್ಧಕ್ಕೆ ಮೊಟಕುಗೊಳಿಸಲಾಗಿದೆ. ಹೀಗಾಗಿ ಶಾಲೆಯ ಮಕ್ಕಳು ಪ್ರಾಣಭಯದಲ್ಲೇ ವಾಹನ ದಟ್ಟಣೆ ಇರುವ ರಸ್ತೆ ದಾಟಿ ಶೌಚಕ್ಕಾಗಿ ಶಾಲೆಯ ಹೊರ ಭಾಗಕ್ಕೆ ತೆರಳುತ್ತಿದ್ದಾರೆ.
ಈ ವೇಳೆ ಮಾತನಾಡಿದ ಶಾಲೆಯ ಎಸ್ಡಿಎಂ ಸದಸ್ಯ ನೀಲಪ್ಪ ಅವರು, ಶಾಲೆಯಲ್ಲಿ ಸಾಕಷ್ಟು ಮಕ್ಕಳು ಇದ್ದು, ಶೌಚಾಲಯ ನಿರ್ಮಾಣ ಮಾಡಲು ಹಿಂದಿನ ಬಿಜೆಪಿ ಸರ್ಕಾರ 2021-22 ರಲ್ಲಿ ರಾಷ್ಟ್ರೀಯ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ 4 ಲಕ್ಷದ ಮೂವತ್ತು ಸಾವಿರ ರೂ. ಗಳ ಅನುದಾನ ಬಿಡುಗಡೆ ಮಾಡಿತ್ತು. ಬಂದ ಅನುದಾನದಲ್ಲಿ ಬೇಲಿಮಲ್ಲೂರು ಗ್ರಾಮ ಪಂಚಾಯತಿ ಅಧಿಕಾರಿಗಳು ಶಾಲೆಯ ಆವರಣದಲ್ಲಿ ಶೌಚಾಲಯಕ್ಕೆ ಅಡಿಪಾಯ ಹಾಕಿ ಕಟ್ಟಡ ಕೂಡ ನಿರ್ಮಾಣ ಮಾಡಿದ್ದಾರೆ. ಅದರೇ ಇದ್ದಕ್ಕಿದ್ದಂತೆ ಶೌಚಾಲಯದ ಅನುದಾನವನ್ನು ಬೇರೊಂದು ಕಾಮಗಾರಿಗೆ ಬಳಕೆ ಮಾಡಿದ್ದರಿಂದ, ಶೌಚಾಲಯ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ. ಕಾಮಗಾರಿ ಪೂರ್ಣಗೊಳ್ಳದ ಕಾರಣ ಪಿಡಿಓ ಅವರ ಗಮನಕ್ಕೆ ತಂದರು ಯಾವುದೇ ಪ್ರಯೋಜನ ಆಗಿಲ್ಲ ಎಂದು ಆರೋಪಿಸಿದರು.
ಮಕ್ಕಳು ಶೌಚಾಲಯಕ್ಕೆ ಹೊರಗೆ ಹೋಗುತ್ತಿರುವುದು ಸಮಸ್ಯೆ ಆಗಿದ್ದು, ಅದಷ್ಟು ಬೇಗ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಒತ್ತಾಯಿಸಿದರು. ಮತ್ತೊಂದೆಡೆ ಶಾಲೆಯಲ್ಲಿ ಶೌಚಾಲಯ ಇಲ್ಲದೆ ಇರುವುದರಿಂದ ಗಂಡು ಮಕ್ಕಳು ಶಾಲೆಯ ಆವರಣದಲ್ಲಿ ಮೂತ್ರ ವಿಸರ್ಜನೆ ಮಾಡುವ ಪರಿಸ್ಥಿತಿ ಎದುರಾಗಿದೆ. ಇನ್ನು ಹೆಣ್ಣು ಮಕ್ಕಳಿಗೆ ಶೌಚಾಲಯ ಇಲ್ಲದೆ ಮನೆಗೆ ತೆರಳಬೇಕಿದೆ. ಇದರಿಂದ ಮಕ್ಕಳು ನಮಗೆ ಶೌಚಾಲಯದ ಕಾಮಗಾರಿ ಪೂರ್ಣಗೊಳಿಸಿ ಎಂದು ಬೇಲಿಮಲ್ಲೂರು ಗ್ರಾಮ ಪಂಚಾಯತಿಗೆ ಮನವಿ ಮಾಡಿದರು.
ಇನ್ನು, ಈ ಬಗ್ಗೆ ಗ್ರಾ.ಪಂ ಅಧ್ಯಕ್ಷರ ಪತಿ ಉಮೇಶ್ ಮಾತನಾಡಿ, ರಾಷ್ಟ್ರೀಯ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಬಂದಂತ ಅನುದಾನದಲ್ಲಿ ಶೌಚಾಲಯ ಕಾಮಗಾರಿ ಆರಂಭಿಸಲಾಗಿತ್ತು. ಇದರ ಅನುದಾನವನ್ನು ಬೇರೊಂದು ಕಾಮಗಾರಿ ಬದಲಾವಣೆ ಆಗಿದ್ದರಿಂದ ಸಿಎಸ್ ಅವರಿಂದ ಪತ್ರ ತಂದು ಹಣ ಬಳಕೆ ಮಾಡಲಾಗಿದೆ. ಕೆಲವೇ ದಿನಗಳಲ್ಲಿ ಕಾಮಗಾರಿ ಆರಂಭಿಸಲಾಗುವುದು. ಈಗಾಗಲೇ ಮಕ್ಕಳು ಬೇರೆ ಶೌಚಾಲಯ ಉಪಯೋಗ ಮಾಡುತ್ತಿದ್ದು, ಸಮಸ್ಯೆ ಏನೂ ಆಗುತ್ತಿಲ್ಲ ಎಂದರು.
ಇದನ್ನೂ ಓದಿ : ಶಿಥಿಲಗೊಂಡ ಕಾಲೇಜಿನಲ್ಲಿ ಪಾಠ: ಕಾಲೇಜಿಗೆ ಲಾಡ್ ಭೇಟಿ, ಪರಿಶೀಲನೆ.. ಬೇರೆ ಕಡೆ ತರಗತಿ ನಡೆಸಲು ಸೂಚನೆ