ದಾವಣಗೆರೆ: ಕಳೆದ ಬಾರಿ ಲಾಕ್ಡೌನ್ ಘೋಷಣೆ ಮಾಡಿದ ಬೆನ್ನಲ್ಲೇ ಸಾಕಷ್ಟು ಜನ ಆಹಾರ ಇಲ್ಲದೇ ಹೈರಾಣಾಗಿದ್ರು. ಈ ಬಾರಿ ಕೂಡ ಕೊರೊನಾ ನಿಯಂತ್ರಿಸಲು ರಾಜ್ಯ ಸರ್ಕಾರ ಲಾಕ್ಡೌನ್ ಘೋಷಣೆ ಮಾಡಿದ್ದು, ಊಟ ಇಲ್ಲದೇ ಅಲೆಮಾರಿ ಕುಟುಂಬಗಳು ಪರದಾಡಬೇಕಾಗುತ್ತವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ದಾವಣಗೆರೆ ನಗರದ ಪಿಬಿ ರಸ್ತೆಯ ಕೂಗಳತೆ ದೂರದಲ್ಲಿರುವ ಕರೂರಿನ ಅಲೆಮಾರಿ ಜನಾಂಗ ವಿಡಿಯೋ ಮಾಡುವ ಮೂಲಕ ತಮ್ಮ ಅಳಲನ್ನು ತೋಡಿಕೊಂಡಿದೆ. 50ಕ್ಕೂ ಹೆಚ್ಚು ಮಕ್ಕಳು ಹಾಗೂ 100ಕ್ಕೂ ಹೆಚ್ಚು ಅಲೆಮಾರಿಗಳು ಇದ್ದು, ಲಾಕ್ಡೌನ್ ಘೋಷಣೆ ಮಾಡಿದ್ದರಿಂದ ಆಹಾರಕ್ಕೆ ತೊಂದರೆಯಾಗಲಿದೆ ಎಂದು ವಿಡಿಯೋ ಮೂಲಕ ಜಿಲ್ಲಾಡಳಿತಕ್ಕೆ ಸಂದೇಶ ರವಾನಿದ್ದಾರೆ.
ಇದನ್ನೂ ಓದಿ: ಕೋವಿಡ್ ಆರ್ಭಟ.. ಮೊನ್ನೆ ತಾಯಿ, ಇಂದು ಇಬ್ಬರು ಪುತ್ರರು ಕೊನೆಯುಸಿರು
ಸೋಪು, ಸರ ಸೇರಿದಂತೆ ಹಲವು ವಸ್ತುಗಳನ್ನು ಮಾರಾಟ ಮಾಡಿ ದಿನದ ದುಡಿಮೆಯಿಂದ ಜೀವನ ನಡೆಸುತ್ತಿರುವ ಅಲೆಮಾರಿಗಳು ಇವರಾಗಿದ್ದು, ಕೋವಿಡ್ನಿಂದ ವ್ಯಾಪಾರ ವಹಿವಾಟು ಇಲ್ಲದೆ ಈಗಾಗಲೇ ಕಷ್ಟ ಪಡುತ್ತಿದ್ದಾರೆ. ಕಳೆದ ವರ್ಷ ಕೂಡ ಆಹಾರವಿಲ್ಲದೇ ಪರದಾಡುತ್ತಿದ್ದ ಅಲೆಮಾರಿಗಳ ವರದಿಯನ್ನು ಮಾಧ್ಯಮಗಳು ಪ್ರಕಟಿಸಿದಾಗ ಎಚ್ಚೆತ್ತ ಜಿಲ್ಲಾಡಳಿತ, ಆಹಾರದ ಕಿಟ್ ವಿತರಣೆ ಮಾಡಿತ್ತು. ಈ ಬಾರಿ ಜಿಲ್ಲಾಡಳಿತ ಏನು ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.