ಹರಿಹರ(ದಾವಣಗೆರೆ) : ವಿವಿಧ ಕ್ಷೇತ್ರದ ಅಸಂಘಟಿತ ಕಾರ್ಮಿಕರಿಗೆ ರಾಜ್ಯ ಸರ್ಕಾರ ಘೋಷಿಸಿರುವ ಧನ ಸಹಾಯದ ಯೋಜನೆಯನ್ನು ವಾದ್ಯ (ಬ್ಯಾಂಡ್‌ಸೆಟ್) ತಯಾರಿಕರಿಗೂ ವಿಸ್ತರಿಸಬೇಕೆಂದು ನಗರ ಆದಿ ದ್ರಾವಿಡ (ಛಲವಾದಿ) ತರುಣ ಸಮಾಜ ಸಿಎಂಗೆ ಮನವಿ ಮಾಡಿದೆ.
ಹರಿಹರ ತಹಶೀಲ್ದಾರ್ ಮೂಲಕ ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು. ತಹಶೀಲ್ದಾರ್ ಕೆ ಬಿ ರಾಮಚಂದ್ರಪ್ಪರಿಗೆ ಮನವಿ ನೀಡಿದ ನಂತರ ಸಮಾಜದ ಅಧ್ಯಕ್ಷ ಡಾ. ಹೆಚ್ ಜಗನ್ನಾಥ್ ಮಾತನಾಡಿ, ಆದಿ ದ್ರಾವಿಡ ಸಮಾಜದವರ ಕುಲಕಸುಬು ಚರ್ಮದಿಂದ ವಿವಿಧ ವಾದ್ಯ ಉಪಕರಣಗಳನ್ನು ತಯಾರಿಸುವುದಾಗಿದೆ. ಈ ಕಾಯಕ ಮಾಡುವವರು ರಾಜ್ಯದಲ್ಲಿ ಅಪಾರ ಸಂಖ್ಯೆಯಲ್ಲಿದ್ದಾರೆ ಎಂದರು.
ಕೊರೊನಾ ಹಾಗೂ ಲಾಕ್‌ಡೌನ್‌ನಿಂದಾಗಿ ಈ ಕುಲಕಸುಬಿನ ಲಕ್ಷಾಂತರ ಜನರು ಬೀದಿ ಪಾಲಾಗಿದ್ದಾರೆ. ಇವರು ಕುಟುಂಬ ನಿರ್ವಹಣೆ ಮಾಡಲಾಗದೆ ತೀವ್ರ ಸಂಕಷ್ಟದಲ್ಲಿದ್ದಾರೆ. ಇತರೆ ಕಾರ್ಮಿಕರಂತೆ ರಾಜ್ಯ ಸರ್ಕಾರವು ಇವರಿಗೂ ಧನ ಸಹಾಯದ ಯೋಜನೆ ವಿಸ್ತರಿಸಬೇಕು ಎಂದಿದ್ದಾರೆ. ಬಳಿಕ ಸಮಾಜದ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಕೊಂಡಜ್ಜಿ ಮಾತನಾಡಿ, ತಾಲೂಕಿನಲ್ಲಿ ಚರ್ಮ ಹಾಗೂ ಇತರೆ ವಾದ್ಯ ತಯಾರಿಸುವವರು, ಮಾರಾಟಗಾರರ 200 ಕುಟುಂಬಗಳಿವೆ. ತಾಲೂಕು ಅಥವಾ ಜಿಲ್ಲಾಡಳಿತದಿಂದ ಇವರಿಗೆ ತಾತ್ಕಾಲಿಕ ಪರಿಹಾರವಾಗಿ ಆಹಾರದ ಕಿಟ್‌ಗಳನ್ನು ವಿತರಿಸಬೇಕೆಂದು ಮನವಿ ಮಾಡಿದರು.
ಮನವಿ ಸ್ವೀಕರಿಸಿದ ತಹಶೀಲ್ದಾರ್ ಕೆ ಬಿ ರಾಮಚಂದ್ರಪ್ಪ ಮಾತನಾಡಿ, ಸಮಾಜದವರ ಈ ಮನವಿಯನ್ನು ಹಿರಿಯ ಅಧಿಕಾರಿಗಳಿಗೆ ರವಾನಿಸಲಾಗುವುದು ಎಂದಿದ್ದಾರೆ. ಈ ವೇಳೆ ಆದಿದ್ರಾವಿಡ (ಛಲವಾದಿ) ತರುಣ ಸಮಾಜದ ಉಪಾಧ್ಯಕ್ಷ ಕೊಟ್ರಪ್ಪ ಪೂಜಾರ್, ಎ ಡಿ ಕೊಟ್ರಬಸಪ್ಪ, ಕೆ ಎನ್ ಇಂದ್ರಕುಮಾರ್, ಆರ್ ಬಸವಲಿಂಗಪ್ಪ ಇತರರಿದ್ದರು.