ದಾವಣಗೆರೆ: ತೆಲಂಗಾಣದ ಪಶುವೈದ್ಯೆಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆಯನ್ನು ಖಂಡಿಸಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಪ್ರತಿಭಟನೆಯನ್ನು ನಡೆಸಲಾಯಿತು. ನಗರದ ಜಯದೇವ ವೃತ್ತದ ಬಳಿ ಜಮಾಯಿಸಿ ಪ್ರತಿಭಟನಾಕಾರರು, ಕ್ರೂರ ಕೃತ್ಯ ಎಸಗಿದ ಕಾಮುಕರಿಗೆ ಮರಣದಂಡನೆ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದರು.
ಇದೊಂದು ಘೋರ ದುರಂತವಾಗಿದ್ದು, ದೇಶದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ಆರೋಪಿಗಳಿಗೆ ನ್ಯಾಯಾಲಯ ಕಠಿಣವಾದ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದರು. ಮಹಿಳೆಯರು ಮನೆಯಿಂದ ಹೊರಗೆ ಓಡಾಡಲು ಭಯ ಪಡುವಂತಾಗಿದ್ದು, ಅವರಿಗೆ ರಕ್ಷಣೆ ನೀಡಲು ಸೂಕ್ತ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು. ಈ ಕುರಿತಾಗಿ ತೆಲಂಗಾಣದ ಗೃಹಸಚಿವರು ಬೇಜವಾಬ್ದಾರಿ ಹಾಗೂ ನಿರ್ಲಕ್ಷ್ಯದ ಹೇಳಿಕೆ ನೀಡಿರುವುದು ಖಂಡನಾರ್ಹ. ಇಂಥ ರಾಜಕಾರಣಿಗಳಿಂದ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಆರೋಪಿಸಿದರು.