ದಾವಣಗೆರೆ : ಸರ್ಕಾರಿ ಆಸ್ಪತ್ರೆಗಳಿಂದ ಖಾಸಗಿ ಆಸ್ಪತ್ರೆಗೆ ಶಿಫಾರಸು ಮಾಡಲಾಗುವ ಕೋವಿಡ್ ರೋಗಿಗಳಿಗೆ ಸರ್ಕಾರದ ಎಬಿಎಆರ್ಕೆ (ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ) ಯೋಜನೆಯಡಿ ವೈದ್ಯಕಿಯ ವೆಚ್ಚ ಭರಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.
ಜಿಲ್ಲೆಯಲ್ಲಿ ಕೋವಿಡ್ ನಿರ್ವಹಣೆ ಸೇರಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಕುರಿತು ಜಿಲ್ಲಾಡಳಿತ ಭವನದ ತುಂಗಾಭದ್ರಾ ಸಭಾಂಗಣದಲ್ಲಿ ಏರ್ಪಡಿಸಲಾದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಉತ್ತಮ ಪ್ರತ್ಯೇಕ ವ್ಯವಸ್ಥೆ ಇರುವವರಿಗೆ ಮಾತ್ರ ಮನೆಯಲ್ಲಿ ಚಿಕಿತ್ಸೆ ಪಡೆಯಲು ಅವಕಾಶ ನೀಡಲಾಗುತ್ತಿದೆ. ಆದರೆ, ಆದಷ್ಟೂ ಆಸ್ಪತ್ರೆ ಅಥವಾ ಕೋವಿಡ್ ಕೇರ್ ಸೆಂಟರ್ಗಳಲ್ಲಿಯೇ ದಾಖಲಾಗುವಂತೆ ಶಿಫಾರಸು ಮಾಡಲಾಗುತ್ತಿದೆ.
ಸದ್ಯ ಜಿಲ್ಲೆಯಲ್ಲಿ 37 ಜನ ಐಸಿಯುನಲ್ಲಿ ಹಾಗೂ 16 ಜನ ವೆಂಟಿಲೇಟರ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಸದ್ಯ 3 ಪ್ರಯೋಗಾಲಯಗಳಲ್ಲಿ ಕೋವಿಡ್ ಪತ್ತೆ ನಡೆಸಲಾಗುತ್ತಿದೆ. ದಿನಕ್ಕೆ ಸುಮಾರು 800 ಮಾದರಿ ಪರೀಕ್ಷೆ ಮಾಡುತ್ತಿದ್ದೇವೆ. ಬರುವ ದಿನಗಳಲ್ಲಿ ದಿನಕ್ಕೆ ಕನಿಷ್ಟ 2500 ಮಾದರಿ ಸಂಗ್ರಹಿಸಿ ಪರೀಕ್ಷೆ ನಡೆಸುವ ಗುರಿ ಹೊಂದಲಾಗಿದೆ.
ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ನಿಗಮದ ಅಧ್ಯಕ್ಷ ಮಾಡಾಳು ವಿರೂಪಾಕ್ಷಪ್ಪ ಮಾತನಾಡಿ, ರೈತರು, ಬಡವರು ಕೋವಿಡ್ ಕಾರಣಕ್ಕಾಗಿ ಖಾಸಗಿ ಆಸ್ಪತ್ರೆಗೆ ದಾಖಲಾದಲ್ಲಿ ಅವರಿಗೆ ವೈದ್ಯಕೀಯ ವೆಚ್ಚ ಭರಿಸಲು ತೊಂದರೆಯಾಗುತ್ತಿದೆ. ಆಸ್ಪತ್ರೆಗಳಿಗೆ ಬರುವ ರೋಗಿಗಳಿಗೆ ಸೂಕ್ತ ಮಾಹಿತಿ ಹಾಗೂ ಚಿಕಿತ್ಸೆ ದೊರಕಿಸಲು ಸಮರ್ಪಕ ವ್ಯವಸ್ಥೆ ಕೈಗೊಳ್ಳಬೇಕು ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಕೋವಿಡ್ಗೆ ಸಂಬಂಧಿಸಿದಂತೆ ಸರ್ಕಾರಿ ಆಸ್ಪತ್ರೆಯ ವೈದ್ಯರು ಖಾಸಗಿ ಆಸ್ಪತ್ರೆಗೆ ಶಿಫಾರಸು ಮಾಡುವ ರೋಗಿಗಳಿಗೆ ಮಾತ್ರ ಎಬಿಎಆರ್ಕೆ ಯೋಜನೆಯಡಿ ವೈದ್ಯಕೀಯ ವೆಚ್ಚ ಭರಿಸಲು ಅವಕಾಶ ಕಲ್ಪಿಸಲಾಗಿದೆ. ಈ ಕುರಿತು ಸರ್ಕಾರಿ ಆಸ್ಪತ್ರೆಗಳಲ್ಲಿ ಮಾಹಿತಿ ಫಲಕ ಹಾಕಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಬೇಗ ಪರೀಕ್ಷಿಸಿಕೊಳ್ಳಿ : ಕೋವಿಡ್ ರೋಗ ಲಕ್ಷಣಗಳು ಕಂಡು ಬಂದರೂ ಕೆಲವರು ಭಯದಿಂದ ಅಥವಾ ನಿರ್ಲಕ್ಷ್ಯದಿಂದ ಪರೀಕ್ಷೆ ಮಾಡಿಸಿಕೊಳ್ಳುತ್ತಿಲ್ಲ. ರೋಗ ತೀವ್ರ ಗಂಭೀರತೆ ಪಡೆದಾಗ ಪರೀಕ್ಷೆಗೆ ಬರುತ್ತಾರೆ. ಆಗ ರೋಗಿಗಳಿಗೆ ಚಿಕಿತ್ಸೆ ನೀಡುವುದು ಕಷ್ಟಕರ. ಕೋವಿಡ್ ಕಾರಣದಿಂದ ಮೃತಪಟ್ಟ ಬಹಳಷ್ಟು ಪ್ರಕರಣಗಳಲ್ಲಿ ಈ ರೀತಿಯಾಗಿರುವುದು ಕಂಡು ಬಂದಿದೆ. ಹೀಗಾಗಿ, ಸಾರ್ವಜನಿಕರು ಜ್ವರ, ನೆಗಡಿ, ಕೆಮ್ಮು ಮುಂತಾದ ರೋಗಲಕ್ಷಣ ಕಂಡು ಬಂದ ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ಪರೀಕ್ಷಿಸಿಕೊಳ್ಳಬೇಕು. ಬೇಗ ರೋಗ ಪತ್ತೆಯಾದಲ್ಲಿ ಬೇಗ ಗುಣಮುಖರಾಗಲು ಅನುಕೂಲವಾಗಲಿದೆ ಎಂದು ಮನವಿ ಮಾಡಿದರು.
ಕೋವಿಡ್ ಮುಕ್ತಗೊಳಿಸಿ- ಶಾಸಕ ಶಾಮನೂರು : ಶಾಮನೂರು ಶಿವಶಂಕರಪ್ಪ ಅವರು ಮಾತನಾಡಿ, ಜಿಲ್ಲೆಯಲ್ಲಿ ಎಲ್ಲಾ ಅಧಿಕಾರಿಗಳು, ವೈದ್ಯರು ಕೋವಿಡ್ ನಿರ್ವಹಣೆಯನ್ನು ಉತ್ತಮವಾಗಿ ಮಾಡುತ್ತಿದ್ದಾರೆ. ಆದರೆ, ಕೋವಿಡ್ ಪ್ರಕರಣ ಹೆಚ್ಚುತ್ತಿರುವುದು ಆತಂಕಕಾರಿ. ಕೋವಿಡ್ ನಿರ್ವಹಣೆ ಇನ್ನಷ್ಟು ಪರಿಣಾಮಕಾರಿಯಾಗಬೇಕು. ಜನರಲ್ಲಿ ಭಯ ನಿವಾರಿಸಿ, ಹೆಚ್ಚಿನ ಜಾಗೃತಿ ಮೂಡಿಸಬೇಕು. ಜಿಲ್ಲೆಯನ್ನು ಆದಷ್ಟು ಶೀಘ್ರ ಕೊರೊನಾ ಮುಕ್ತವಾಗಿಸಲು ಶ್ರಮಿಸಬೇಕು ಎಂದರು.
ಮಾಡಾಳು ವಿರೂಪಾಕ್ಷಪ್ಪ ಮಾತನಾಡಿ, ಆಸ್ಪತ್ರೆ, ಹಾಸ್ಟೆಲ್ ಅಥವಾ ಕೋವಿಡ್ ಹೆಲ್ತ್ ಕೇರ್ ಸೆಂಟರ್ಗಳಲ್ಲಿ ಕೋವಿಡ್ ರೋಗಿಗಳಿಗೆ ಉತ್ತಮ ಗುಣಮಟ್ಟದ ಊಟ, ಉಪಹಾರ ಕಲ್ಪಿಸಬೇಕು. ಜಿಲ್ಲಾ ಕೇಂದ್ರದಲ್ಲಿ ಈ ವ್ಯವಸ್ಥೆ ಚೆನ್ನಾಗಿದೆ. ಆದರೆ, ತಾಲೂಕು ಮಟ್ಟದಲ್ಲಿ ಬೇರೆ ಬೇರೆ ರೀತಿಯಾಗಿದೆ. ಹೀಗಾಗಿ, ಜಿಲ್ಲಾ ಮಟ್ಟದಲ್ಲಿ ಕೋವಿಡ್ ರೋಗಿಗಳಿಗೆ ನೀಡಲಾಗುವ ಊಟ, ಉಪಹಾರದ ಮೆನು ಸಿದ್ಧಪಡಿಸಿ, ಜಿಲ್ಲೆಯಾದ್ಯಂತ ಇದೇ ವ್ಯವಸ್ಥೆ ಜಾರಿಯಾಗುವಂತೆ ಮಾಡಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಜಿಲ್ಲಾಧಿಕಾರಿಗಳು ಸಮ್ಮತಿಸಿದರು.