ದಾವಣಗೆರೆ: ಶಾಲಾ ಆವರಣದಲ್ಲಿ ಆಟವಾಡುತ್ತಿದ್ದ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ್ದ ಅಪರಾಧಿಗೆ ಜೀವಾವಧಿ ಶಿಕ್ಷೆ ಹಾಗೂ 65 ಸಾವಿರ ರೂ. ದಂಡ ವಿಧಿಸಿ 2ನೇ ಹೆಚ್ಚುವರಿ ಸೆಷನ್ಸ್ ಹಾಗೂ ವಿಶೇಷ ನ್ಯಾಯಾಲಯ(ಫೋಕ್ಸೋ) ಆದೇಶ ನೀಡಿದೆ.
ಚನ್ನಗಿರಿ ತಾಲೂಕಿನ ಹಳ್ಳಿಮಲ್ಲಾಪುರ ಗ್ರಾಮದ ಮಹಾಂತೇಶ ನಾಯ್ಕ (23) ಶಿಕ್ಷೆಗೆ ಗುರಿಯಾದ ಆರೋಪಿ.
ಘಟನೆ ಹಿನ್ನೆಲೆ:
ಹಳ್ಳಿ ಮಲ್ಲಾಪುರ ಗ್ರಾಮದ ಸರ್ಕಾರಿ ಶಾಲೆಯ ಆವರಣದಲ್ಲಿ ಆಟವಾಡುತ್ತಿದ್ದ ಅಪ್ರಾಪ್ತೆಯನ್ನು ಮಹಾಂತೇಶ್ ನಾಯ್ಕ ಎಂಬಾತ ಚಾಕೋಲೆಟ್ ಕೊಟ್ಟು ಪುಸಲಾಯಿಸಿ ಶಾಲೆ ಹಿಂಭಾಗಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದ ಎನ್ನಲಾಗಿದೆ. ಈ ಬಗ್ಗೆ ಸಂತೆಬೆನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಮಹಾಂತೇಶ ನಾಯ್ಕ ವಿರುದ್ಧ ಮಕ್ಕಳ ಸಂರಕ್ಷಣಾ ಕಾಯ್ದೆ ಕಲಂ 6 ಅಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದ್ದರು. ಆರೋಪ ಸಾಬೀತಾದ ಹಿನ್ನೆಲೆ ಮಹಾಂತೇಶ್ ನಾಯ್ಕನಿಗೆ ಜೀವಾವಧಿ ಶಿಕ್ಷೆ ಹಾಗೂ 65 ಸಾವಿರ ರೂ. ದಂಡ ವಿಧಿಸಿ ನ್ಯಾಯಾಧೀಶರಾದ ಎಸ್ ನಾಗಶ್ರೀ ಆದೇಶ ನೀಡಿದ್ದಾರೆ. ಸರ್ಕಾರ ಪರ ವಿಶೇಷ ಸರ್ಕಾರಿ ಅಭಿಯೋಜಕ ಎಸ್ ಹೆಚ್ ಎಸ್ ಶೌಕತ್ ಅಲಿ ವಾದ ಮಂಡಿಸಿದರು.