ದಾವಣಗೆರೆ: ಕಾಂಪೌಂಡ್ ನಿಂದ ಜಾರಿ ಬಿದ್ದು ವಿದ್ಯಾರ್ಥಿನಿ ಮೃತಪಟ್ಟಿರುವ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಕುರುಬರಹಳ್ಳಿ ಸಮೀಪದ ಮಾನ್ಯತಾ ಪಬ್ಲಿಕ್ ಕಾಲೇಜಿನ ಇದೇ ತಿಂಗಳ 18 ರಂದು ಭಾನುವಾರ ನಡೆದಿದೆ. 16 ವರ್ಷ ವಯಸ್ಸಿನ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ. ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.
ಮೃತ ವಿದ್ಯಾರ್ಥಿನಿಯು ವಿಜಯನಗರ ಜಿಲ್ಲೆಯ ಹರಪನಹಳ್ಳಿ ಪಟ್ಟಣದ ನಿವಾಸಿ ಶಶಿಕಾಂತ್ ಅವರ ಪುತ್ರಿ ಎಂದು ತಿಳಿದುಬಂದಿದೆ. ಇದೇ 18ರ ಭಾನುವಾರದಂದು ರಾತ್ರಿ 11:30 ಕ್ಕೆ ಮಾನ್ಯತಾ ವಸತಿ ಕಾಲೇಜಿನ ಕಾಂಪೌಂಡ್ ಹತ್ತುವಾಗ ವಿದ್ಯಾರ್ಥಿನಿ ಜಾರಿ ಬಿದ್ದಿದ್ದು, ಗಂಭೀರವಾಗಿ ಗಾಯಗೊಂಡಿದ್ದಳು.
ಇನ್ನು, ಕಾಂಪೌಂಡ್ನಿಂದ ಬಿದ್ದು ತೀವ್ರ ಗಾಯಗೊಂಡಿದ್ದ ಬಾಲಕಿಯನ್ನು ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆಂದು ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಅರವಿಂದರ್ ಅವರು ಮಾಹಿತಿ ನೀಡಿದ್ದಾರೆ. ಇನ್ನು ಮೃತ ವಿದ್ಯಾರ್ಥಿನಿಯನ್ನು ಕಳೆದ ನಾಲ್ಕು ದಿನಗಳ ಹಿಂದೆಯಷ್ಟೇ ಈ ಕಾಲೇಜಿಗೆ ಪೋಷಕರು ಸೇರಿಸಿದ್ದರು. ಮಾನ್ಯತಾ ವಸತಿ ಕಾಲೇಜಿನಲ್ಲಿ ಸೈನ್ಸ್ ವಿಭಾಗದ ಪಿಯು ಪ್ರಥಮ ವರ್ಷಕ್ಕೆ ಪ್ರವೇಶ ಪಡೆದಿದ್ದ ಬಾಲಕಿ ಇದೀಗ ಸಾವನ್ನಪ್ಪಿರುವುದು ಪೋಷಕರ ಆಕ್ರಂದನಕ್ಕೆ ಕಾರಣವಾಗಿದೆ.
2015ರಲ್ಲೂ ಇದೇ ಪಬ್ಲಿಕ್ ವಸತಿ ಕಾಲೇಜಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ ವಿದ್ಯಾರ್ಥಿನಿ: ಹರಿಹರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2015ರ ಡಿಸೆಂಬರ್ 14ರಂದು ಇದೇ ಸಂಸ್ಥೆಯಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದಳು. ಇದೀಗ ಮತ್ತೊಂದು ದುರ್ಘಟನೆ ಜರುಗಿದೆ.
ಪ್ರತ್ಯೇಕ ಪ್ರಕರಣ: ಹರಿಹರ ಬಸ್ ನಿಲ್ದಾಣದಲ್ಲಿ 1.80 ಲಕ್ಷ ಮೌಲ್ಯದ ಮಾಂಗಲ್ಯ ಸರ ಎಗರಿಸಿದ ಖದೀಮರು: ಹರಿಹರ ನಗರದಲ್ಲಿ ಸರಗಳ್ಳತನ ಹೆಚ್ಚಾಗುತ್ತಿದ್ದು, ಇದೇ ತಿಂಗಳು 18 ರಂದು ಭಾನುವಾರ ದಾವಣಗೆರೆ ಜಿಲ್ಲೆಯ ಹರಿಹರದ ಸರ್ಕಾರಿ ಸಾರಿಗೆ ಬಸ್ ನಿಲ್ದಾಣದಲ್ಲಿ ಖದೀಮರು ಚಿನ್ನದ ಸರ ಎಗರಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಧಾರವಾಡ ಜಿಲ್ಲೆಯ ಹುಬ್ಬಳ್ಳಿ ನಗರದ ಉಣಕಲ್ ನಿವಾಸಿ ಶೋಭಾ ಸರ ಕಳೆದುಕೊಂಡವರು. 1.80 ಲಕ್ಷ ಮೌಲ್ಯದ 37 ಗ್ರಾಮ ತೂಕದ ಮಾಂಗಲ್ಯ ಸರವನ್ನು ಕಳ್ಳರು ಎಗರಿಸಿದ್ದಾರೆ.
ಸರ ಕಳೆದುಕೊಂಡ ಶೋಭಾ ಅವರು ತಮ್ಮ ಪತಿ ಕೊಟ್ರೇಶ್ ಅವರೊಂದಿಗೆ ಹುಬ್ಬಳ್ಳಿಯಿಂದ ಹರಿಹರಕ್ಕೆ ಸರ್ಕಾರಿ ಸಾರಿಗೆ ಬಸ್ನಲ್ಲಿ ಪ್ರಯಾಣ ಬೆಳೆಸಿದ್ದರು. ಹೊನ್ನಾಳಿಯ ಹಿರೇಕಲ್ಮಠಕ್ಕೆ ಹೋಗಿ ವಾಪಸ್ ಹುಬ್ಬಳ್ಳಿಗೆ ತೆರಳುವ ವೇಳೆ ಹರಿಹರಕ್ಕೆ ಆಗಮಿಸಿದ ಶೋಭಾ-ಕೊಟ್ರೇಶ್ ದಂಪತಿ ಬಸ್ ಹತ್ತುವ ವೇಳೆ ಸರ ಕಳ್ಳತನವಾಗಿದೆ ಎಂದು ಹರಿಹರ ನಗರ ಠಾಣೆಯ ಪೊಲೀಸರು ಮಾಹಿತಿ ನೀಡಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಕದ್ದ ಬೈಕ್ನಲ್ಲಿ ಸರಗಳ್ಳತನ ಮಾಡುತ್ತಿದ್ದ ಆರೋಪಿ ಬಂಧನ!