ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾಲಯದ 8ನೇ ಘಟಿಕೋತ್ಸವದ ನಿಮಿತ್ತ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳು ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡರು.
ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಹೆಚ್ಚು ಅಂಕಗಳಿಸಿ ಸಾಧನೆಗೈದ 44 ವಿದ್ಯಾರ್ಥಿಗಳ ಪೈಕಿ 74 ಚಿನ್ನದ ಪದಕಗಳನ್ನು ವಿವಿಧ ವಿಭಾಗದ ವಿದ್ಯಾರ್ಥಿಗಳ ಪಡೆದಿದ್ದಾರೆ. ಇದಲ್ಲದೆ 44 ವಿದ್ಯಾರ್ಥಿಗಳಲ್ಲಿ 34 ವಿದ್ಯಾರ್ಥಿನಿಯರು ಚಿನ್ನದ ಪದಕ ಪಡೆದಿರುವುದು ವಿಶೇಷವಾಗಿತ್ತು. ಇನ್ನು ದಾವಣಗೆರೆ ತಾಲೂಕಿನ ಸಂತೇಬೆನ್ನೂರಿನ ನಿವಾಸಿ ಮೇಘಾನ ಎಂಬ ವಿದ್ಯಾರ್ಥಿನಿ ಗಣಿತ ವಿಭಾಗದಲ್ಲಿ ನಾಲ್ಕು ಸ್ವರ್ಣ ಪದಕಗಳೊಂದಿಗೆ ಚಿನ್ನದ ಹುಡುಗಿ ಎಂಬ ಗೌರವಕ್ಕೆ ಪಾತ್ರರಾದರು.
ಸ್ನಾತಕೋತ್ತರ ವಿಭಾಗದಲ್ಲಿ 19 ಸ್ವರ್ಣಪದಕಗಳನ್ನು ಮೂವರು ಪುರುಷ ಮತ್ತು 9 ವಿದ್ಯಾರ್ಥಿನಿಯರಿಗೆ ಪ್ರದಾನ ಮಾಡಲಾಯಿತು. ಇದಲ್ಲದೆ ಆಂಗ್ಲ ವಿಭಾಗದಲ್ಲಿ ನಿಸರ್ಗಾ ಎಂಬ ವಿದ್ಯಾರ್ಥಿನಿ ರ‍್ಯಾಂಕ್ ಗಳಿಸಿದ್ದು, ನಾಲ್ಕು ಪದಕಗಳನ್ನು ಮುಡಿಗೇರಿಸಿಕೊಂಡರು. ಇನ್ನು ಕನ್ನಡ ವಿಭಾಗದಲ್ಲಿ ವಿಜಯಲಕ್ಷ್ಮಿ ಬಾರ್ಕಿ ಎಂಬ ವಿದ್ಯಾರ್ಥಿನಿ ಮೂರು ಪದಕಗಳನ್ನು ಪಡೆದಿದ್ದು, ಸಂತಸ ವ್ಯಕ್ತಪಡಿಸಿದರು.
ಈ ಬಾರಿ ವಿವಿಧ ವಿಭಾಗಗಳಲ್ಲಿ 7 ಜನರಿಗೆ ಪಿಎಚ್ಡಿ ಪದವಿ ಪ್ರದಾನ ಮಾಡಲಾಯಿತು. ಇನ್ನು ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ ಗಣ್ಯರಾದ ಸಂಸದ ಜಿ.ಎಂ.ಸಿದ್ದೇಶ್ವರ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಧ್ಯಾಪಕ ಡಾ. ಎಂ.ಕೆ. ರಮೇಶ್ಗೆ ಗೌರವ ಡಾಕ್ಟರೇಟ್ ಪುರಸ್ಕಾರ ನೀಡಲಾಯಿತು.