ದಾವಣಗೆರೆ: ಜಿಲ್ಲೆಯ ಫಾರಂ ಒಂದರಲ್ಲಿ 8 ಸಾವಿರಕ್ಕೂ ಹೆಚ್ಚು ಕೋಳಿಗಳು ಸಾವನ್ನಪ್ಪಿದ್ದರಿಂದ ಸತ್ತ ಕೋಳಿಗಳನ್ನು ಕೊಂಡಜ್ಜಿ ಅರಣ್ಯ ಪ್ರದೇಶಕ್ಕೆ ವಿಲೇವಾರಿ ಮಾಡಿರುವುದು ಗ್ರಾಮದಲ್ಲಿ ಹಕ್ಕಿಜ್ವರದ ಭೀತಿಗೆ ಕಾರಣವಾಗಿದೆ.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬನ್ನಿಕೋಡು ಗ್ರಾಮ ಕಳೆದ ಬಾರಿ ಹಕ್ಕಿಜ್ವರದಿಂದ ತತ್ತರಿಸಿ ಹೋಗಿತ್ತು. ಈ ಘಟನೆ ಮಾಸುವ ಮುನ್ನವೇ ಇದೀಗ ಮತ್ತೆ ದಾವಣಗೆರೆ ಜಿಲ್ಲೆಯಲ್ಲಿ ಹಕ್ಕಿಜ್ವರದ ಶಂಕೆ ವ್ಯಕ್ತವಾಗುತ್ತಿದೆ. ಹರಿಹರ ತಾಲೂಕಿನ ಕೊಂಡಜ್ಜಿ ಪೌಲ್ಟ್ರಿ ಫಾರಂನಲ್ಲಿ ಕೋಳಿಗಳು ಸಾವನ್ನಪ್ಪಿದ್ದು, ಸತ್ತ ಕೋಳಿಗಳನ್ನು ಕೊಂಡಜ್ಜಿ ಅರಣ್ಯ ಪ್ರದೇಶದಲ್ಲಿ ಪ್ಲಾಸ್ಟಿಕ್ ಚೀಲಗಳಲ್ಲಿ ವಿಲೇವಾರಿ ಮಾಡಲಾಗಿದೆ.
ಕಳೆದ 8 ದಿನಗಳಲ್ಲಿ 7ರಿಂದ 8 ಸಾವಿರ ಕೋಳಿಗಳು ಸಾವನ್ನಪ್ಪಿದ್ದು, ಪೌಲ್ಟ್ರಿ ಫಾರಂ ಮಾಲೀಕರು ಸತ್ತ ಕೋಳಿಗಳನ್ನು ಕೊಂಡಜ್ಜಿ ಕೆರೆಯ ಅರಣ್ಯಪ್ರದೇಶದಲ್ಲಿ ಬಿಸಾಡಿರುವುದು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.
ಕೋಳಿ ಸಾಯುತ್ತಿರುವ ವಿಷಯವನ್ನು ಪಶು ಆರೋಗ್ಯ ಇಲಾಖೆಗೆ ತಿಳಿಸದೆ, ಕೋಳಿಗಳನ್ನು ಸರಿಯಾಗಿ ವಿಲೇವಾರಿ ಮಾಡದೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈ ವಿಚಾರ ತಿಳಿದು ಕೊಂಡಜ್ಜಿ ಗ್ರಾಮ ಪಂಚಾಯತಿ ಪಿಡಿಒ ಹಾಗೂ ಪಶುವೈದ್ಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಅಧಿಕಾರಿಗಳು ಹಕ್ಕಿಜ್ವರದ ವೈರಸ್ ಇದ್ದರೆ ಅದನ್ನು ನಾಶಪಡಿಸಲು ಸಂಬಂಧಿಸಿದ ಕೆಲ ಔಷಧಿ ಸಿಂಪಡಿಸಿದ್ದಾರೆ. ಇದಲ್ಲದೆ ಸ್ಥಳೀಯ ಅಧಿಕಾರಿಗಳು ಮುಂಜಾಗ್ರತೆಗಾಗಿ ಸತ್ತಿರುವ ಕೋಳಿಗಳ ಸ್ಯಾಂಪಲ್ಸ್ ಸಂಗ್ರಹಿಸಿ ಪರೀಕ್ಷೆಗಾಗಿ ಕಳುಹಿಸಿದ್ದು, ಪರೀಕ್ಷಾ ವರದಿಗಾಗಿ ಕಾಯುತ್ತಿದ್ದಾರೆ.
ಇದನ್ನೂ ಓದಿ: ಜಾತ್ರೆಗೆ ಬಂದ ಬಾಲಕರಿಬ್ಬರು ತುಂಗಭದ್ರಾ ನದಿಯಲ್ಲಿ ಮುಳುಗಿ ಸಾವು