ದಾವಣಗೆರೆ: ಕೊರೊನಾ ಸೋಂಕಿನಿಂದ ಗುಣಮುಖರಾದ ನಗರದ ಬಾಷಾ ನಗರದ ನರ್ಸ್ ಸೇರಿ 7 ಮಂದಿಯನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಯಿಂದ ಚಪ್ಪಾಳೆ ತಟ್ಟುವ ಮೂಲಕ ಬಿಡುಗಡೆ ಮಾಡಲಾಯಿತು.
ಡಿಸಿ ಸೇರಿದಂತೆ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಚಪ್ಪಾಳೆ ತಟ್ಟುವ ಮೂಲಕ ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಿದರು. ಬಾಷಾ ನಗರದ P-533 ಸೋಂಕಿತೆ ಸ್ಟಾಫ್ ನರ್ಸ್ನಿಂದ 42 ಮಂದಿಗೆ ಸೋಂಕು ಹಬ್ಬಿತ್ತು. ಈಗ ನರ್ಸ್ ಸಂಪೂರ್ಣ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ, ಶುಕ್ರವಾರ ಜಿಲ್ಲೆಯಲ್ಲಿ ಮೂರು ಹೊಸ ಕೊರೊನಾ ಪಾಸಿಟಿವ್ ಪ್ರಕರಣ ಕಂಡು ಬಂದಿದೆ. ಪಿ-1656, ಪಿ-1657, ಪಿ-1658 ಜಾಲಿ ನಗರದ ಕಂಟ್ಮೇಮೆಂಟ್ ಝೋನ್ಗೆ ಸಂಬಂಧಿಸಿದವರು. ಈ 7 ಜನರು ಪಿ-533, 581, 660, 661, 665, 666 ಹಾಗೂ 696 ಇಬ್ಬರು ಪುರುಷರು ಹಾಗೂ ಐವರು ಹೆಣ್ಣು ಮಕ್ಕಳನ್ನು ಬಿಡುಗಡೆ ಮಾಡಲಾಗಿದೆ. ಒಟ್ಟು ಹಳೆಯ 14 ಜನರು ಹಾಗೂ ಇಂದು 7 ಜನರು ಸೇರಿ ಒಟ್ಟು 21 ಜನರನ್ನು ಬಿಡುಗಡೆ ಮಾಡಲಾಗಿದೆ. ಒಟ್ಟು 118ರಲ್ಲಿ 93 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿವೆ ಎಂದರು.
ಆದಷ್ಟು ಬೇಗ ಎಲ್ಲಾ ರೋಗಿಗಳು ಗುಣಮುಖರಾಗುವ ವಿಶ್ವಾಸವಿದೆ. ಅವರನ್ನು ಕೂಡಾ ಪ್ರೋಟೋಕಾಲ್ ಪ್ರಕಾರ ಒಳ್ಳೆಯ ಚಿಕಿತ್ಸೆ ನೀಡಿ, ಅವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿ ಆದಷ್ಟು ಬೇಗ ಗುಣಮುಖರಾನ್ನಾಗಿಸುವ ಪ್ರಯತ್ನ ಮಾಡಲಾಗುತ್ತಿದೆ. 14 ದಿನದ ಕ್ವಾರಂಟೈನ್ ಮುಗಿದವರ ಸ್ಯಾಂಪಲ್ ಮರು ಸಂಗ್ರಹಿಸಿ ಕಳುಹಿಸಲಾಗಿದೆ. ಯಾರೊಬ್ಬರೂ ಭಯ ಪಡಬೇಕಿಲ್ಲ. ಸ್ಯಾನಿಟೈಸರ್, ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಂಡು ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು ಎಂದರು.