ದಾವಣಗೆರೆ: 1960ರ ದಶಕದಲ್ಲಿ ಹೆಣ್ಣುಮಕ್ಕಳಿಗೆ ಶಿಕ್ಷಣ ಎಂಬುದು ದೂರದ ಮಾತೇ ಆಗಿತ್ತು. ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶಾಲೆಗಳಿರಲಿಲ್ಲ. ಶಾಲೆಗಳಿದ್ದರೂ ದೂರದೂರುಗಳಿಗೆ ಕಳುಹಿಸಲು ಪೋಷಕರು ಹಿಂಜರಿಯುತ್ತಿದ್ದರು. ಹೀಗಾಗಿ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಲೇಬೇಕೆಂಬ ಉದ್ದೇಶದಿಂದ ಧರ್ಮಪ್ರಕಾಶ ಚಿಗಟೇರಿ ಮುರುಗೆಪ್ಪನವರ ಪುತ್ರ ವೀರಭದ್ರಪ್ಪ ಎಂ.ಚಿಗಟೇರಿ ಅವರು ಬಾಲಕಿಯರಿಗಾಗಿ ದಾವಣಗೆರೆಯಲ್ಲಿ ಮೊಟ್ಟಮೊದಲ ವಿದ್ಯಾಮಂದಿರ ತೆರೆದರು. ಈ ಶಾಲೆ ಇದೀಗ 60 ವರ್ಷಗಳನ್ನು ಪೂರೈಸಿದೆ.
1962ರಲ್ಲಿ ಮೊದಲ ಬಾಲಕಿಯರ ಶಾಲೆಯನ್ನು ಹಳೆ ದಾವಣಗೆರೆಯಲ್ಲಿರುವ ಮಹಿಳಾ ಮಕ್ಕಳ ಆಸ್ಪತ್ರೆಯ ಕೊಠಡಿ ಜಗದ್ಗುರು ಜಯವಿಭವ ವಿದ್ಯಾಸಂಸ್ಥೆಯಡಿ ತೆರೆಯಲಾಯಿತು. ಆರಂಭದಲ್ಲಿ ಒಟ್ಟು 7 ವಿದ್ಯಾರ್ಥಿನಿಯರು ದಾಖಲಾತಿ ಪಡೆದಿದ್ದರು. ಬಳಿಕ ಅಂದಿನ ಸಿಎಂ ದಿ.ಎಸ್.ನಿಜಲಿಂಗಪ್ಪನವರ ಸಹಕಾರದಿಂದ ಶ್ರೀ ಜಗದ್ಗುರು ಜಯವಿಭವ ವಿದ್ಯಾಸಂಸ್ಥೆಯ ಅಡಿಯಲ್ಲಿ ಬಾಲಕಿಯರಿಗಾಗಿ ಅಕ್ಕಮಹಾದೇವಿ ಬಾಲಿಕಾ ಪ್ರೌಢಶಾಲೆ ಹಾಗೂ ಬಾಲಕರಿಗಾಗಿ ಜಗದ್ಗುರು ಜಯದೇವ ಮುರುಘರಾಜೇಂದ್ರ ಪ್ರೌಢಶಾಲೆಯನ್ನು ಅದೇ ವರ್ಷ ಪ್ರಾರಂಭಿಸಿದರು.
ಅಂದು ಕೇವಲ 7 ರೂಪಾಯಿ ಶಾಲಾ ಶುಲ್ಕ ನಿಗದಿ ಮಾಡಿ ಬಾಲಕಿಯರಿಗೆ ವಿದ್ಯಾದಾನ ಮಾಡಲಾಗ್ತಿತ್ತು. ಬಳಿಕ ದಾವಣಗೆರೆ ನಗರಸಭೆಯವರು ನೀಡಿದ ಎರಡು ನಿವೇಶನಗಳಲ್ಲಿ, ನರಸರಾಜಪೇಟೆಯಲ್ಲಿ ಅಕ್ಕಮಹಾದೇವಿ ಬಾಲಕಿಯರ ಪ್ರೌಢಶಾಲೆ ಹಾಗೂ ವಿನೋಬನಗರದಲ್ಲಿ ಬಾಲಕರ ಶಾಲೆ ತಲೆ ಎತ್ತಿತು. ಆಸ್ಪತ್ರೆ ಹಾಗು ಗ್ರಂಥಾಲಯದಲ್ಲಿ ನಡೆಯುತ್ತಿದ್ದ ಶಾಲೆಯನ್ನು ಸ್ಥಳಾಂತರಿಸಿ, ಸ್ವಂತ ಶಾಲಾ ಕಟ್ಟಡ ಪ್ರಾರಂಭಿಸಲು ಚಿಗಟೇರಿ ಮನೆತನ, ಲಿಂಗೈಕ್ಯ ಹಂಜಿಗೆ ಮಠದ ಪ್ರಭಯ್ಯನವರು, ದಾವಣಗೆರೆ ಅರ್ಬನ್ ಬ್ಯಾಂಕ್‌ನವರ ಸಹಾಯದಿಂದ ಸ್ವಂತ ಕಟ್ಟಡ ನಿರ್ಮಾಣ ಮಾಡಲಾಯಿತು.
60ರ ಸಂಭ್ರಮ: ಅಂದು ಎರಡು ಶಾಲೆಗಳು ಆರಂಭವಾಗಿ ಪ್ರಸ್ತುತ 9 ಶಾಲೆಗಳಾಗಿ ಸಂಸ್ಥೆ ಬೆಳೆದುನಿಂತಿದೆ. ಎಂಟು ಶಾಲೆಗಳ ಪೈಕಿ ಒಟ್ಟು 1,500 ಮಕ್ಕಳು ಕಲಿಯುತ್ತಿದ್ದಾರೆ. ಇನ್ನು ಈ ಶಾಲೆಗಳಲ್ಲಿ ಒಂದು ವರ್ಷಕ್ಕೆ ಒಂದು ಮಗುವಿಗೆ ಕೇವಲ 1,000 ರೂಪಾಯಿ ದಾಖಲಾತಿ ಶುಲ್ಕ ನಿಗದಿ ಮಾಡಲಾಗಿದೆ. ಕನ್ನಡ ಹಾಗು ಆಂಗ್ಲ ಮಾಧ್ಯಮದಲ್ಲಿ ಈ ಪ್ರೌಢಶಾಲೆಗಳು ಶಿಕ್ಷಣವನ್ನು ನೀಡುತ್ತಿದ್ದು, ಇಲ್ಲಿ ಒಟ್ಟು 75 ಸಿಬ್ಬಂದಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳು ಇಂದು ದೇಶ ವಿದೇಶಗಳಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ಸಂಸ್ಥೆಯು ನೂರಾರು ಜನರಿಗೆ ಉದ್ಯೋಗ ಕೊಟ್ಟು ಅವರ ಕುಟುಂಬಕ್ಕೂ ನೆರವಾಗಿದೆ.
ಹಳೆ ವಿದ್ಯಾರ್ಥಿನಿ ಹಾಗು ನಿವೃತ್ತ ಮುಖ್ಯ ಶಿಕ್ಷಕಿ ವಾಗ್ದೇವಿ ಪ್ರತಿಕ್ರಿಯಿಸಿ, "ಅಂದು ಬಾಲಕಿಯರು ಶಿಕ್ಷಣದಿಂದ ವಂಚಿತರಾಗಿದ್ದರು. ಅವರಿಗೆ ಅನುಕೂಲ ಆಗಲೆಂದು ಚಿಗಟೇರಿ ಎಂ.ವೀರಭದ್ರಪ್ಪನವರು ಶಾಲೆ ಆರಂಭಿಸಿದರು. ನಾನು ಇದೇ ಶಾಲೆಯ ಹಳೆ ವಿದ್ಯಾರ್ಥಿನಿ. ಕೇವಲ 7-8 ಬಾಲಕಿಯರಿಂದ ಆರಂಭವಾದ ಶಾಲೆ ಇದು" ಎಂದರು.
ನಿವೃತ್ತ ಮುಖ್ಯೋಪಾಧ್ಯಾಯ ಎಂ.ಟಿ.ಮಾಳಗಿ ಮಾತನಾಡಿ, "ಹಳೆ ದಾವಣಗೆರೆ ಪ್ರದೇಶದಲ್ಲಿ ವರ್ತಕರು, ಕಾರ್ಮಿಕರು ಹೆಚ್ಚು ವಾಸವಿದ್ದಾರೆ. ಅವರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದರು. ಹೀಗಾಗಿ ವಿದ್ಯಾರ್ಥಿನಿಯರಿಗೆ ಶಾಲೆ ತೆರೆಯಲಾಯಿತು. ಅಕ್ಕಮಹಾದೇವಿ ಶಾಲೆ ಜಿಲ್ಲೆಯ ಮೊಟ್ಟಮೊದಲ ಬಾಲಕಿಯರ ಶಾಲೆಯಾಗಿದೆ. ಕನ್ನಡ, ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಚಿಗಟೇರಿ ಮನೆತನದ ಧನಸಹಾಯದಿಂದ ಕಟ್ಟಡ ನಿರ್ಮಾಣ ಮಾಡಲಾಯಿತು" ಎಂದು ತಿಳಿಸಿದರು.
ವೀರಭದ್ರಪ್ಪ ಚಿಗಟೇರಿ ಅವರ ಮೊಮ್ಮಗ ಹಾಗೂ ಶಾಲೆಯ ಸೆಕ್ರೆಟರಿ ಮನೋಹರ್ ಚಿಗಟೇರಿ ಪ್ರತಿಕ್ರಿಯಿಸಿ, "ಜಿಲ್ಲೆಯಲ್ಲಿ ಅತಿ ಕಡಿಮೆ ಶುಲ್ಕ ಪಡೆಯುತ್ತಿರುವ ಶಾಲೆ ಇದು. ಕೂಡಲಸಂಗಮ ಪೀಠದ ಜಯಮೃತುಂಜಯ ಶ್ರೀ, ದಿ.ಸಿಎಂ ಜೆ.ಹೆಚ್.ಪಟೇಲ್ ಅವರ ಪುತ್ರ ಮಹಿಮಾ ಪಟೇಲ್ ಇದೇ ಶಾಲೆಯಲ್ಲಿ ಕಲಿತಿದ್ದರು" ಎಂದು ಹೇಳಿದರು.
ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಉಚಿತ ಬೈಸಿಕಲ್ ವಿತರಣೆ ಬಗ್ಗೆ ಸಿಎಂ ಜೊತೆ ಚರ್ಚೆ: ಸಚಿವ ಮಧು ಬಂಗಾರಪ್ಪ