ದಾವಣಗೆರೆ: ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ಜಾಲವನ್ನು ಪತ್ತೆ ಹಚ್ಚಿ, 5 ಕೆಜಿ 250 ಗ್ರಾಂ ಗಾಂಜಾ ಹಾಗೂ ಐವರು ಆರೋಪಿಗಳ ಸಮೇತ 10 ಲಕ್ಷ ಮೌಲ್ಯದ ಕಾರನ್ನು ಚನ್ನಗಿರಿ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಹೇಳಿದರು.
ಇದರಿಂದ ಆಂಧ್ರಪ್ರದೇಶ ಹಾಗೂ ಕರ್ನಾಟಕಕ್ಕೂ ಗಾಂಜಾ ಲಿಂಕ್ ಇರುವುದು ಬೆಳಕಿಗೆ ಬಂದಿದೆ. ರಾಜಮಂಡ್ರಿಯ ವಿಜಯವಾಡ ಜಿಲ್ಲೆಯಿಂದ ತಂದಿದ್ದ ಗಾಂಜಾವನ್ನು ಚನ್ನಗಿರಿ ತಾಲೂಕಿನ ಗರಗ ಕ್ರಾಸ್ ಬಳಿ ಅಡ್ಡಗಟ್ಟಿ ತಪಾಸಣೆ ಮಾಡಿದ ವೇಳೆ ಜಾಲ ಪತ್ತೆಯಾಗಿದೆ ಎಂದರು.
ಆರೋಪಿಗಳಾದ ಚನ್ನಗಿರಿ ನಗರದ ಶಫೀರ್ ಖಾನ್, ಜಬೀವುಲ್ಲಾ, ಪತ್ಹಾಖಾನ್ ಹಾಗೂ ಶಿವಮೊಗ್ಗ ಜಿಲ್ಲೆಯ ಆಯನೂರು ಗ್ರಾಮದ ತೌಸೀಫ್ ಹಾಗೂ ತಾಲೂಕಿನ ತಿಮ್ಮಪ್ಪನ ಕ್ಯಾಂಪ್ನ ಚಂದ್ರಶೇಖರ್ ಎಂಬುವವರನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಗಳಲ್ಲಿ ಒಬ್ಬ ವಿಜಯವಾಡ ಮೂಲದ ಮಹಿಳೆಯನ್ನು ಮದುವೆಯಾಗಿದ್ದು, ಪತ್ನಿ ಸಂಬಂಧಿಕರ ಕಡೆಯಿಂದ ಅಕ್ರಮವಾಗಿ ಗಾಂಜಾ ಮಾರಾಟ ಮಾಡಲಾಗುತ್ತಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರಿನಲ್ಲಿ ಗಾಂಜಾ ಗ್ರಾಹಕರನ್ನು ಗುರುತು ಮಾಡಲಾಗುತ್ತಿತ್ತು. ಇನ್ನು ಈ ಗ್ಯಾಂಗ್ನ ಹಿಂದೆ ಹಲವರು ಕೆಲಸ ಮಾಡುತ್ತಿದ್ದಾರೆ. ಅವರನ್ನು ತನಿಖೆ ನಡೆಸಿ ಬಂಧಿಸಲಾಗುವುದು ಎಂದು ಹೇಳಿದರು.
ಪುಡಿ ಮಾಡಿದ ಗಾಂಜಾ ಪ್ಯಾಕೇಟ್ಗಳನ್ನು ಸಿದ್ಧಗೊಳಿಸಿ, ಸೇವನೆಗೆ ಬೇಕಾದ ರೀತಿಯಲ್ಲಿ ತಯಾರು ಮಾಡಿದ ಪ್ಯಾಕೇಟ್ಗಳನ್ನು ಕಾರಿನಲ್ಲಿಟ್ಟುಕೊಂಡು ಸಾಗಾಟ ಮಾಡುತ್ತಿದ್ದರು. ತನಿಖೆ ನಂತರ ಇನ್ನಷ್ಟು ವಿಷಯಗಳು ಬಹಿರಂಗಗೊಳ್ಳಲಿವೆ ಎಂದು ಹೇಳಿದರು.
ಚನ್ನಗಿರಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಪ್ರಶಾಂತ ಜಿ.ಮುನ್ನೋಳಿ, ಸರ್ಕಲ್ ಇನ್ಸ್ಪೆಕ್ಟರ್ ಆರ್.ಆರ್.ಪಾಟೀಲ್, ಪಿಎಸ್ಐ ಜಗದೀಶ್ ನೇತೃತ್ವದ ತಂಡ ದಾಳಿ ನಡೆಸಿ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಜಿಲ್ಲೆಯ ಚನ್ನಗಿರಿ, ಹೊನ್ನಾಳಿ, ಜಗಳೂರು ಸೇರಿದಂತೆ ಹಲವೆಡೆ ಗಾಂಜಾ ಮಾರಾಟ ಮಾಡುತ್ತಿರುವುದು ಗೊತ್ತಾಗಿದ್ದು, ಸದ್ಯದಲ್ಲಿಯೇ ಆರೋಪಿಗಳ ಹೆಡೆಮುರಿ ಕಟ್ಟಲಾಗುವುದು ಎಂದರು.