ದಾವಣಗೆರೆ: ಜಿಲ್ಲೆಯಲ್ಲಿಂದು ಕೊರೊನಾಕ್ಕೆ 80 ವರ್ಷದ ವೃದ್ಧನೋರ್ವ ಬಲಿಯಾಗಿದ್ದು, ಮೃತರ ಸಂಖ್ಯೆ 9ಕ್ಕೇರಿದೆ. ಇಂದು ಐವರಿಗೆ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ ಇದೀಗ 338ಕ್ಕೇರಿದೆ.
ನಗರದ ಬೇತೂರು ರಸ್ತೆಯ ಹೆಚ್ಟಿಎನ್ ಕಾಂಪೌಂಡ್ ನಿವಾಸಿ 80 ವರ್ಷದ ವೃದ್ಧ ತೀವ್ರ ಉಸಿರಾಟದ ಸಮಸ್ಯೆಯಿಂದ ಜೂನ್ 24 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ನಿನ್ನೆಯಷ್ಟೇ ಮೃತ ವೃದ್ಧನ ಗಂಟಲು ದ್ರವ ಪರೀಕ್ಷಾ ವರದಿ ಬಂದಿದ್ದು, ಕೊರೊನಾ ಇರುವುದು ದೃಢಪಟ್ಟಿತ್ತು. ಬಳಿಕ ರಾತ್ರಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.
ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಮೂವರಲ್ಲಿ ಸೋಂಕು ಇರುವುದು ಖಚಿತವಾಗಿದ್ದು, P-13222 ಸೋಂಕಿತನಿಂದ ಇಬ್ಬರಿಗೆ ಕೊರೊನಾ ವಕ್ಕರಿಸಿದೆ. ಸೋಂಕಿತರೆಲ್ಲರೂ ಪುರುಷರಾಗಿದ್ದು, ಈ ಪೈಕಿ ಮೂವರು ವೃದ್ಧರಿಗೆ ಸೋಂಕು ಹರಡಿರುವುದು ಆತಂಕಕ್ಕೆ ಕಾರಣವಾಗಿದೆ. ದಾವಣಗೆರೆಯ ಆಜಾದ್ನಗರ ಒಂದು, ಹೊನ್ನಾಳಿ ತಾಲೂಕಿನಲ್ಲಿ 2, ಹರಪನಹಳ್ಳಿ ಹಾಗೂ ಹಾವೇರಿಯಿಂದ ಬಂದಿದ್ದ ತಲಾ ಒಬ್ಬರಲ್ಲಿ ಕೊರೊನಾ ಇರುವುದು ದೃಢಪಟ್ಟಿದೆ.
ಇನ್ನು ಜಿಲ್ಲೆಯಲ್ಲಿ ಇಂದು 13 ಮಂದಿ ಕೊರೊನಾ ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಒಟ್ಟು 285 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. 9 ಮಂದಿ ಮೃತಪಟ್ಟಿದ್ದರೆ, 44 ಸಕ್ರಿಯ ಪ್ರಕರಣಗಳಿದ್ದು, ರೋಗಿಗಳಿಗೆ ಕೋವಿಡ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.