ಬೆಂಗಳೂರು: ನಗರದ ದಕ್ಷಿಣ ತಾಲೂಕು ಕೆಂಗೇರಿ ಹೋಬಳಿಯ ಚನ್ನಸಂದ್ರ ಹಾಗೂ ಹಲಗೆವಡೇರಹಳ್ಳಿ ನಡುವೆ ಹಾದು ಹೋಗುವ ರಾಜಕಾಲುವೆ ಒತ್ತುವರಿ ಮಾಡಿ ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡುತ್ತಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ಕುರಿತಂತೆ ಸರ್ಕಾರ ಹಾಗೂ ಬಿಬಿಎಂಪಿಗೆ ಹೈಕೋರ್ಟ್ ಮಂಗಳವಾರ ನೋಟಿಸ್ ಜಾರಿಗೊಳಿಸಿದೆ. ಜೊತೆಗೆ, ಅರ್ಜಿಯಲ್ಲಿ ಪ್ರಶ್ನಿಸಲಾದ ಸ್ಥಳದಲ್ಲಿ ನಿರ್ಮಾಣ ಕಾಮಗಾರಿ ಮುಂದುವರೆದಲ್ಲಿ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಸಿ.ಕೆ.ಮಂಜುನಾಥ ಎಂಬವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೆ.ವಿ.ಅರವಿಂದ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿತು.
ಅಲ್ಲದೆ, ರಾಜ್ಯ ಸರ್ಕಾರ, ಬೆಂಗಳೂರು ನಗರ ಜಿಲ್ಲಾಽಕಾರಿ, ಬೆಂಗಳೂರು ದಕ್ಷಿಣ ತಾಲೂಕು ತಹಶೀಲ್ದಾರ್, ಬಿಬಿಎಂಪಿ ಮುಖ್ಯ ಆಯುಕ್ತ, ಬಿಬಿಎಂಪಿ ರಾಜರಾಜೇಶ್ವರಿನಗರ ವಲಯ ಆಯುಕ್ತರಿಗೆ ನೋಟಿಸ್ ಹಾಗೂ ಒತ್ತುವರಿದಾರ ಖಾಸಗಿ ವ್ಯಕ್ತಿಗಳಿಗೆ ತುರ್ತು ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ನವೆಂಬರ್ 21ಕ್ಕೆ ಮುಂದೂಡಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ರಾಜಕಾಲುವೆ ಒತ್ತುವರಿ ಮಾಡಿಕೊಂಡಿರುವ ಖಾಸಗಿ ವ್ಯಕ್ತಿಗಳು ರಾಜಕೀಯ ಪ್ರಭಾವಿಗಳಾಗಿದ್ದು, ಪಾಲಿಕೆಯ ಮಾಜಿ ಕಾರ್ಪೋರೇಟರ್ ಸಂಬಂಧಿಗಳಾಗಿದ್ದಾರೆ. ಇವರೊಂದಿಗೆ ಬಿಬಿಎಂಪಿ ಅಧಿಕಾರಿಗಳೂ ಶಾಮೀಲಾಗಿದ್ದಾರೆ. ಪ್ರತಿನಿತ್ಯ ಕಾಮಗಾರಿ ನಡೆಯುತ್ತಿದೆ. ಈಗಾಗಲೇ ಶೇ.70ರಷ್ಟು ಕಾಮಗಾರಿ ಮುಗಿದಿದೆ. ಒಂದೊಮ್ಮೆ ಕಾಮಗಾರಿ ಪೂರ್ಣಗೊಂಡರೆ ಅರ್ಜಿ ಅರ್ಥ ಕಳೆದುಕೊಳ್ಳುತ್ತದೆ. ಹಾಗಾಗಿ ನಿರ್ಮಾಣ ಕಾಮಗಾರಿಗೆ ತಡೆ ನೀಡಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ: ವಕ್ಫ್ ಆಸ್ತಿ ಕುರಿತು ವಿವಾದಾತ್ಮಕ ಹೇಳಿಕೆ: ಪ್ರಕರಣ ರದ್ದು ಕೋರಿ ಹೈಕೋರ್ಟ್ ಮೊರೆ ಹೋದ ಬೊಮ್ಮಾಯಿ