ದಾವಣಗೆರೆ : ಮಹಾಮಾರಿ ಕೊರೊನಾಗೆ ನಾಲ್ವರು ಬಲಿಯಾಗಿದ್ದು, ಮೃತರ ಸಂಖ್ಯೆ 52ಕ್ಕೆ ತಲುಪಿದೆ. ಹಾಗೂ 108 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ತೀವ್ರ ಉಸಿರಾಟ ಸಮಸ್ಯೆ, ಕಫ ಹಾಗೂ ಜ್ವರದಿಂದ ಬಳಲುತ್ತಿದ್ದ ದಾವಣಗೆರೆಯ ಬಸವರಾಜಪೇಟೆಯ 59 ವರ್ಷದ ವೃದ್ಧ ಜುಲೈ 30ರಂದು ಮೃತಪಟ್ಟಿದ್ದಾರೆ. ಕೆಟಿಜೆ ನಗರದ 63 ವರ್ಷದ ವೃದ್ಧ ಜುಲೈ 28ರಂದು, ಜಾಲಿನಗರದ 80 ವರ್ಷದ ವೃದ್ಧೆ ಜುಲೈ 29 ಹಾಗೂ ಚನ್ನಗಿರಿಯ 55 ವರ್ಷದ ಮಹಿಳೆ ಜುಲೈ 31ರಂದು ಕೋವಿಡ್ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ ಮೂಲಕ ಸೋಂಕಿನಿಂದ ಕೊನೆಯುಸಿರೆಳೆದವರ ಸಂಖ್ಯೆ 53ಕ್ಕೆ ಏರಿಕೆಯಾಗಿದೆ.
ಇನ್ನೂ ಜಿಲ್ಲೆಯಲ್ಲಿಂದು 108 ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ 2206ಕ್ಕೇರಿದೆ. ದಾವಣಗೆರೆಯಲ್ಲಿ 73, ಹರಿಹರದಲ್ಲಿ 12, ಜಗಳೂರಿನಲ್ಲಿ 8, ಚನ್ನಗಿರಿಯಲ್ಲಿ 6, ಹೊನ್ನಾಳಿಯಲ್ಲಿ 7 ಹಾಗೂ ಅಂತರ್ ಜಿಲ್ಲಾ ಪ್ರಯಾಣ ಮಾಡಿದ್ದ ಇಬ್ಬರಲ್ಲಿ ವೈರಾಣು ಇರುವುದು ದೃಢಪಟ್ಟಿದೆ.
98 ಮತ್ತು 93 ವರ್ಷದ ವೃದ್ಧರು ಸೇರಿ 188 ಮಂದಿ ಡಿಸ್ಚಾರ್ಜ್ : ಹರಿಹರದ 98 ವರ್ಷದ ವೃದ್ಧ ಹಾಗೂ 93 ವರ್ಷದ ವೃದ್ಧ ಸೇರಿದಂತೆ 188 ಮಂದಿ ಕೊರೊನಾ ಗೆದ್ದು ಬಂದಿದ್ದಾರೆ. ಒಟ್ಟು 390 ಮಂದಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ 764 ಕೊರೊನಾ ಸೋಂಕಿತರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತುರ್ತು ಚಿಕಿತ್ಸಾ ಘಟಕದಲ್ಲಿ 10 ಮಂದಿ ಇದ್ದು, ವೈದ್ಯರು ತೀವ್ರ ನಿಗಾ ವಹಿಸಿದ್ದಾರೆ.