ದಾವಣಗೆರೆ: ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ತುತ್ತಾಗಿದ್ದ ಎರಡೂವರೆ ತಿಂಗಳ ಮಗು ಗುಣಮುಖವಾಗಿದ್ದು, ಇಂದು ಒಟ್ಟು ಮೂವರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
P-3638 ಸಂಖ್ಯೆಯ ಎರಡೂವರೆ ತಿಂಗಳ ಮಗುವಿಗೆ ತಾಯಿಯಿಂದ ಮಹಾಮಾರಿ ವಕ್ಕರಿಸಿತ್ತು. ಉಳಿದಂತೆ P-3640, P-4339 ಸೋಂಕಿತರು ಕೂಡಾ ಗುಣಮುಖರಾಗಿ ಜಿಲ್ಲಾಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇಂದು ಜಿಲ್ಲೆಯಲ್ಲಿ ಯಾವುದೇ ಕೊರೊನಾ ಪಾಸಿಟಿವ್ ಪ್ರಕರಣ ವರದಿಯಾಗಿಲ್ಲ. ಇದುವರೆಗೆ ಜಿಲ್ಲೆಯಲ್ಲಿ 223 ಸೋಂಕಿತರಿದ್ದು, 171 ಮಂದಿ ಗುಣಮುಖರಾಗಿ ಬಿಡುಗಡೆ ಆಗಿದ್ದಾರೆ.
ಜಿಲ್ಲೆಯಲ್ಲಿ 46 ಸಕ್ರಿಯ ಪ್ರಕರಣಗಳಿದ್ದು, ಆರು ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಇಂದು 159 ಮಂದಿಯ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿದ್ದು, ಒಟ್ಟು 461 ಸ್ಯಾಂಪಲ್ಗಳ ವರದಿ ಬರಬೇಕಿದೆ.