ದಾವಣಗೆರೆ : ಸಿಎಂ ನೀಡಿದ ಭರವಸೆಯಂತೆ ಪಂಚಮಸಾಲಿ ಲಿಂಗಾಯತ ಸಮಾಜಕ್ಕೆ ಆರು ತಿಂಗಳಲ್ಲಿ 2ಎ ಮೀಸಲಾತಿ ನೀಡಬೇಕು.
ಇಲ್ಲವಾದಲ್ಲಿ ಮತ್ತೆ ಕೂಡಲ ಸಂಗಮದಿಂದ ಪಾದಯಾತ್ರೆ ಆರಂಭಿಸಿ 20 ಲಕ್ಷ ಜನರನ್ನು ಬೆಂಗಳೂರಿನಲ್ಲಿ ಸೇರಿಸುತ್ತೇವೆ ಎಂದು ಪಂಚಮಸಾಲಿ ಲಿಂಗಾಯತ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನ್ನವರ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಹರಿಹರ ನಗರದಲ್ಲಿ ನಡೆದ ಶರಣು ಶರಣಾರ್ಥಿ ಸಮಾವೇಶದಲ್ಲಿ ಮಾತನಾಡಿದ ಅವರು, ನಾವು ಸುಮ್ಮನೆ ಕೂರುವವರಲ್ಲ, ಆರು ತಿಂಗಳ ಬಳಿಕ ಮೀಸಲಾತಿ ನೀಡದಿದ್ರೆ ನಾವು ಮತ್ತೇ ಬರುತ್ತೇವೆ. ಮತ್ತೆ ಕೂಡಲ ಸಂಗಮದಿಂದ ಪಾದಯಾತ್ರೆ ಆರಂಭ ಮಾಡುತ್ತೇವೆ.
ಪಾದಯಾತ್ರೆ ಬಳಿಕ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ನಡೆದ ಧರಣಿ ಸತ್ಯಾಗ್ರಹ ಆರಂಭಿಸಿದ್ದರು. ಆದ್ರೆ, ಇಂತಹ ಧರಣಿ ಸತ್ಯಾಗ್ರಹದಲ್ಲಿ ಯಾರದ್ದೋ ಮಾತು ಕೇಳಿ ಹರಿಹರ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ ಪಾಲ್ಗೊಳ್ಳಲಿಲ್ಲ.
ಯಾಕೆ ಪಾಲ್ಗೊಳ್ಳಲಿಲ್ಲ ಎಂದು ಕೇಳಿದೆ, ಅದಕ್ಕೆ ಅವರಂದ್ರು ನಾನು ಬೇರೆ ರೀತಿಯಲ್ಲಿ ಹೋರಾಟ ಮಾಡ್ತೀನಿ ಎಂದು ವಚನಾನಂದ ಸ್ವಾಮೀಜಿ ವಿರುದ್ದ ವಾಗ್ದಾಳಿ ನಡೆಸಿದರು. ಆರು ತಿಂಗಳ ಬಳಿಕ ಸರ್ಕಾರ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಆದೇಶ ಹೊರಡಿಸಬೇಕು. ಆದೇಶ ಬರದಿದ್ದರೆ, ಮತ್ತೆ ಹೋರಾಟ ಖಚಿತ ಎಂದರು.