ದಾವಣಗೆರೆ: ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದ ಆರು ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ 68ಕ್ಕೆ ಏರಿದೆ. 224 ಮಂದಿಯಲ್ಲಿ ಇಂದು ಕೋವಿಡ್ ಸೋಂಕು ದೃಢಪಟ್ಟಿದೆ.
ದಾವಣಗೆರೆಯ ಐದು ಮಂದಿ ಹಾಗೂ ಚನ್ನಗಿರಿಯ ಒಬ್ಬರು ಕೊರೊನಾಗೆ ಬಲಿಯಾಗಿದ್ದಾರೆ. ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಇಮಾಮ್ ನಗರದ 30 ವರ್ಷದ ಮಹಿಳೆ, ಡಯಾಬಿಟಿಸ್ ಹಾಗೂ ಹೈಪರ್ ಟೆನ್ಷನ್ನಿಂದ ದಾಖಲಾಗಿದ್ದ ಯಾತ್ರಿ ಕಂಫರ್ಟ್ಸ್ ಸಮೀಪದ 46 ವರ್ಷದ ಪುರುಷ, ರಕ್ತದೊತ್ತಡದಿಂದ ದಾಖಲಾಗಿದ್ದ ಚನ್ನಗಿರಿ ತಾಲೂಕಿನ ಕತ್ತಲಗೆರೆಯ 38 ವರ್ಷದ ಪುರುಷ, ಹೈಪರ್ ಟೆನ್ಷನ್ನಿಂದ ದಾಖಲಾಗಿದ್ದ ಹೋಂಡಾ ಸರ್ಕಲ್ನ 62 ವರ್ಷದ ವೃದ್ಧ, ಹೈಪರ್ ಟೆನ್ಷನ್ನಿಂದ ಬಳಲುತ್ತಿದ್ದ ಪಿ.ಜೆ. ಬಡಾವಣೆಯ 75 ವರ್ಷದ ವೃದ್ಧ ಆಗಸ್ಟ್ 4 ರಂದು ಮೃತಪಟ್ಟಿದ್ದಾರೆ. ಹೈಪರ್ ಟೆನ್ಷನ್ನಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ 49 ವರ್ಷದ ಪುರುಷನಲ್ಲಿ ಕೊರೊನಾ ದೃಢಪಟ್ಟಿದ್ದು, ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
ದಾವಣಗೆರೆಯಲ್ಲಿ 140, ಹರಿಹರ 37, ಜಗಳೂರು 6, ಚನ್ನಗಿರಿ 22, ಹೊನ್ನಾಳಿ 10 ಹಾಗೂ ಹೊರ ಜಿಲ್ಲೆಗಳಿಂದ ಬಂದ 9 ಮಂದಿಯಲ್ಲಿ ಸೋಂಕಿರುವುದು ಖಚಿತವಾಗಿದೆ.
ಜಿಲ್ಲೆಯಲ್ಲಿ ಒಟ್ಟು 2,843 ಮಂದಿಗೆ ಸೋಂಕು ತಗುಲಿದ್ದು, 91 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೆ 1,745 ಮಂದಿ ಬಿಡುಗಡೆ ಆಗಿದ್ದಾರೆ. ಪ್ರಸ್ತುತ 1,030 ಸಕ್ರಿಯ ಪ್ರಕರಣಗಳಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ತುರ್ತು ಚಿಕಿತ್ಸಾ ಘಕಟದಲ್ಲಿ ಹತ್ತು ಮಂದಿ ಇದ್ದು, ತೀವ್ರ ನಿಗಾ ವಹಿಸಲಾಗಿದೆ.