ಮಂಗಳೂರು : ನಿವೇಶನ ರಹಿತರು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಸ್ಥಳೀಯವಾಗಿ ಲಭ್ಯವಿರುವ ಜಾಗದಲ್ಲಿ ಯಾವುದೇ ಸಮಸ್ಯೆ, ತೊಂದರೆಗಳಿಲ್ಲದಿದ್ದಲ್ಲಿ ಅರ್ಹರಿಗೆ ಹಕ್ಕು ಪತ್ರ ನೀಡುವಂತೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಹಾಯಕ ಆಯುಕ್ತರಿಗೆ ಸೂಚನೆ ನೀಡಿದರು.
ದ.ಕ ಜಿಪಂನ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಗರ ಪ್ರದೇಶಗಳಲ್ಲಿ 9 ಸಾವಿರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ 20 ಸಾವಿರ ಮಂದಿ ನಿವೇಶನ ರಹಿತರಿದ್ದಾರೆ ಎಂಬುದು ಸಮೀಕ್ಷೆಯಿಂದ ತಿಳಿದು ಬಂದಿದೆ. ಇವರಿಗೆ ನಿವೇಶನ ಒದಗಿಸುವ ಉದ್ದೇಶದಿಂದ ಈಗಾಗಲೇ 120 ಎಕರೆ ಜಮೀನನ್ನು ಗುರುತಿಸಲಾಗಿದೆ. ಹಾಗಾಗಿ, ಕುಮ್ಕಿ, ಡೀಮ್ಡ್ ಫಾರೆಸ್ಟ್ ಸೇರಿ ಯಾವುದೇ ಸಮಸ್ಯೆಗಳು ಇಲ್ಲದ ಜಮೀನಿಗೆ ಸಂಬಂಧಿಸಿದಂತೆ ಮುಂದಿನ 15 ದಿನಗಳಲ್ಲಿ ಹಕ್ಕು ಪತ್ರ ವಿತರಿಸುವಂತೆ ಆದೇಶಿಸಿದರು.
ದ.ಕ ಜಿಲ್ಲಾಧಿಕಾರಿ ಡಾ.ಕೆ ವಿ ರಾಜೇಂದ್ರ ಮಾತನಾಡಿ, ಗ್ರಾಪಂ ಮಟ್ಟದಲ್ಲಿ ಯಾವುದೇ ಸ್ಥಳವನ್ನು ಶಾಲೆ, ಮೈದಾನ ಹಾಗೂ ಅಂಗನವಾಡಿ ಇತ್ಯಾದಿ ಯಾವುದೇ ಸಾರ್ವಜನಿಕ ಉದ್ದೇಶಕ್ಕಾಗಿ ಮಂಜೂರು ಮಾಡುವ ಸಂದರ್ಭ ಅಲ್ಲಿನ ಸ್ಥಳೀಯರಿಗೆ ಪೂರಕ ರಸ್ತೆಗಳನ್ನು ಗುರುತು ಮಾಡಬೇಕು. ಒಂದು ವೇಳೆ ಗೊತ್ತು ಮಾಡಿದ ಸ್ಥಳದಲ್ಲಿ ರಸ್ತೆ ತಕರಾರು ಬಂದಲ್ಲಿ ಅದಕ್ಕೆ ವಿಎ ಅವರನ್ನು ಹೊಣೆಗಾರರನ್ನಾಗಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮಂಗಳೂರು ಎಸಿಗೆ ಖಾದರ್ ತರಾಟೆ : ನಗರದ ಉಳ್ಳಾಲ ಸಮೀಪದ ಕಿನ್ಯ ಎಂಬಲ್ಲಿ ಕುಮ್ಕಿ ಭೂಮಿಯಲ್ಲಿ ವಾಸಿಸುತ್ತಿರುವ ಬಡವರಿಗೆ ತಹಶೀಲ್ದಾರ್ ನೀಡಿರುವ ಹಕ್ಕುಪತ್ರಗಳನ್ನು ಕೆಲ ಶ್ರೀಮಂತರು ನೀಡಿರುವ ದೂರಿನಂತೆ ಅಲ್ಲಿಗೆ ತೆರಳಿ ಸ್ಥಳವನ್ನು ತನಿಖೆಯೂ ಮಾಡದೆ ರದ್ದು ಮಾಡಲಾಗಿದೆ ಎಂದು ಮಂಗಳೂರು ಸಹಾಯಕ ಆಯಕ್ತ ಮದನ್ ಮೋಹನ್ ವಿರುದ್ಧ ಶಾಸಕ ಯು ಟಿ ಖಾದರ್ ಗರಂ ಆದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ.ಕೆ ವಿ ರಾಜೇಂದ್ರ ಅವರು, ಸ್ಥಳ ಪರಿಶೀಲನೆ ನಡೆಸಿ ನ್ಯಾಯಯುತವಾಗಿ ಸಮಸ್ಯೆ ಬಗೆಹರಿಸಿ ಎಂದು ಸೂಚನೆ ನೀಡಿದರು.
ಸಂಸದ ನಳಿನ್‌ರಿಂದ ಆಧಾರ್ ತಿದ್ದುಪಡಿ ಕೈಪಿಡಿ ಅನಾವರಣ : ದ.ಕ.ಜಿಲ್ಲೆಯ 80 ಅಂಚೆ ಕಚೇರಿಗಳಲ್ಲಿ ಈಗಾಗಲೇ ಆಧಾರ್ ಕಾರ್ಡ್ ಸೇವೆ ಒದಗಿಸಲಾಗುತ್ತಿದೆ. ಜನರಿಂದ ಈ ಸಂದರ್ಭ ಬಂದಿರುವ ದೂರುಗಳು, ಸಂಶಯಗಳನ್ನು ಪರಿಗಣಿಸಿ ಅವುಗಳಿಗೆ ಪರಿಹಾರ ನೀಡುವ ಉದ್ದೇಶದಿಂದ ಕನ್ನಡದಲ್ಲಿ ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಕೈಪಿಡಿಯನ್ನು ಸಿದ್ಧಗೊಳಿಸಲಾಗಿದೆ. ಇದನ್ನು ಮಂಗಳೂರು ಅಂಚೆ ವಿಭಾಗದ ಅಧೀಕ್ಷಕ ಶ್ರೀಹರ್ಷ ಸಿದ್ಧಪಡಿಸಿದ್ದು, ಸಂಸದ ನಳಿನ್ ಕುಮಾರ್ ಕಟೀಲ್ ಅವರು ಅನಾವರಣಗೊಳಿಸಿದರು.