ಸುರತ್ಕಲ್ (ಮಂಗಳೂರು): ಸುಮುದ್ರ ಕಿನಾರೆಯಲ್ಲಿ ಕಾರು ಚಲಾಯಿಸಲು ಹೋಗಿ ಬೆಂಗಳೂರು ಮೂಲದ ಯುವಕರ ತಂಡವೊಂದು ಸಂಕಷ್ಟಕ್ಕೆ ಸಿಲುಕಿದ ಘಟನೆ ನಡೆದಿದೆ. ಇಲ್ಲಿನ ಗುಡ್ಡೆಕಪ್ಲು ಸಮುದ್ರ ತೀರದಲ್ಲಿ ಕಾರು ಚಲಾಯಿಸಲು ಹೋಗಿ ಕಾರು ಮರಳಿನಲ್ಲಿ ಹೂತು ಹರಸಾಹಸ ಪಟ್ಟು ಕಾರು ಮೇಲೆತ್ತಲಾಗಿದೆ.
ಸುರತ್ಕಲ್ ಗುಡ್ಡೆಕೊಪ್ಲ ಸಮುದ್ರ ಕಿನಾರೆಯಲ್ಲಿ ಕಾರು ಚಲಾಯಿಸಿಕೊಂಡು ಹೋಗಿ ಕೆಟ್ಟು ನಿಂತಿರುವ ಡ್ರಜ್ಜರ್ ಬಳಿ ತೆರಳುವ ಯೋಜನೆಯನ್ನು ಯುವಕರ ತಂಡ ಹಾಕಿಕೊಂಡಿತ್ತು. ಆದರೆ ಸಮುದ್ರದಲ್ಲಿ ಕಾರನ್ನು ಚಲಾಯಿಸಿ ಅತ್ತ ತೆರಳುತ್ತಿದ್ದಂತೆ ಕಾರು ಸಮುದ್ರದ ಮರಳಿನಲ್ಲಿ ಹೂತು ಹೋಗಿದೆ.
ಇದೇ ಸಂದರ್ಭ ಸಮುದ್ರದಲ್ಲಿ ಅಲೆಗಳ ಉಬ್ಬರ ಹೆಚ್ಚಳವಾಗಿ ಕಾರಿಗೆ ತೆರೆ ಅಪ್ಪಳಿಸುತ್ತಿದ್ದಂತೆ ಕಾರು ಕೊಚ್ಚಿಕೊಂಡು ಹೋಗುವ ಅಪಾಯ ಎದುರಾಯಿತು. ಈ ವೇಳೆ ಯುವಕರ ತಂಡ ಭೀತಿಯಿಂದ ಕಾರನ್ನು ಮೇಲೆತ್ತಲು ಕ್ರೇನ್ ತರಿಸುವ ಪ್ರಯತ್ನ ನಡೆಸಿದರು. ಆದರೆ ಕ್ರೇನ್ ಸಮುದ್ರ ಕಿನಾರೆಗೆ ಬಂದರೆ ಅದೂ ಸಹ ಮರಳಲ್ಲಿ ಸಿಲುಕುವ ಸಾಧ್ಯತೆಯಿದ್ದರಿಂದ ಆ ಯೋಜನೆಯನ್ನೂ ಕೈಬಿಡಲಾಯಿತು.
ಬಳಿಕ ಸ್ಥಳೀಯರೇ ಜೊತೆಗೂಡಿ ಕಾರನ್ನು ದಡ ಸೇರಿಸಲು ಯತ್ನಿಸಿ ಯಶಸ್ವಿಯಾಗಿದ್ದಲ್ಲದೆ, ಯುವಕರಿಗೆ ಬುದ್ಧಿಮಾತು ಹೇಳಿ ಅಲ್ಲಿಂದ ಕಳುಹಿಸಿದ್ದಾರೆ.