ಬಂಟ್ವಾಳ: 'ಓ ಯಮ ದೇವನೇ, ಹೆತ್ತ ತಾಯಿ ಸಾಯೋ ಮುನ್ನ ಕರೆದುಕೋ ಒಮ್ಮೆ ನನ್ನ, ಅಮ್ಮಾ ಕ್ಷಮಿಸಿ' ಹೀಗೆಂದು ವಾಟ್ಸ್ಆ್ಯಪ್ನಲ್ಲಿ ಸ್ಟೇಟಸ್ ಹಾಕಿಕೊಂಡು ಅನಾರೋಗ್ಯ ಪೀಡಿತ ಜೀವನ್ಮರಣ ಸ್ಥಿತಿಯಲ್ಲಿರುವ ತಾಯಿಯ ಕಷ್ಟ ನೋಡಲಾಗದೆ ಯುವಕನೋರ್ವ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ನೆಟ್ಲಮುಡ್ನೂರು ಗ್ರಾಮದ ಪಂತಡ್ಕ ನಿವಾಸಿ ನೀರಜ್ (30) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಸೋಮವಾರ ರಾತ್ರಿ ಬಂಟ್ವಾಳದ ಪಾಣೆಮಂಗಳೂರಿನಲ್ಲಿರುವ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಂಗಳವಾರ ಸ್ಥಳೀಯ ಈಜುಗಾರ ಮೊಹಮ್ಮದ್ ನಂದಾವರ ಹಾಗೂ ತಂಡ, ಬಂಟ್ವಾಳ ಅಗ್ನಿಶಾಮಕ ದಳದ ತಂಡ ಹುಡುಕಾಟ ನಡೆಸಿ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ ಎಂದು ತಿಳಿದು ಬಂದಿದೆ.
ಈ ಸಂಬಂಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಓದಿ: ಸಿಸಿಬಿ ಪೊಲೀಸರ ಭರ್ಜರಿ ಬೇಟೆ: ಅಂತಾರಾಷ್ಟ್ರೀಯ ಡ್ರಗ್ ಪೆಡ್ಲರ್ ಅರೆಸ್ಟ್
ನೆಟ್ಲಮುಡ್ನೂರು ಗ್ರಾಮದ ಪಂತಡ್ಕ ನಿವಾಸಿ ನೀರಜ್ ಅವರ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದು, ಅವರನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥಿತಿ ಗಂಭೀರವಾಗಿತ್ತು. ಸೋಮವಾರ ಸಂಜೆ ಪರಿಸ್ಥಿತಿ ಚಿಂತಾಜನಕವಾಗಿದೆ ಎಂಬ ಮಾಹಿತಿ ಪಡೆದ ನೀರಜ್ ಖಿನ್ನತೆಗೊಳಗಾಗಿ ಸ್ಟೇಟಸ್ ಹಾಕಿ ನೇತ್ರಾವತಿ ನದಿಗೆ ಹಾರಿದ್ದಾನೆ ಎನ್ನಲಾಗ್ತಿದೆ.
ಈಗಾಗಲೇ ನೀರಜ್ ತಂದೆ ನಿಧನ ಹೊಂದಿದ್ದು, ಅಣ್ಣನೂ ಮೃತಪಟ್ಟಿದ್ದಾರೆ. ತಾಯಿ ವೆಂಟಿಲೇಟರ್ನಲ್ಲಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಅಕ್ಕ ವಿದೇಶದಲ್ಲಿದ್ದರೆ, ಮನೆಯಲ್ಲಿ ನೀರಜ್ ಮತ್ತು ಅಕ್ಕನ ಮಕ್ಕಳಿಬ್ಬರು ವಾಸಿಸುತ್ತಿದ್ದರು. ಸದ್ಯ ನೀರಜ್ ಆತ್ಮಹತ್ಯೆಯಿಂದ ಇಡೀ ಕುಟುಂಬವೇ ಅನಾಥವಾಗಿದೆ. ನನಗೆ ಯಾಕೆ ಈ ಕಷ್ಟ?, ನೋವಿದ್ದರೂ ನಗೋದೇ ಆಗೋಯ್ತು, ದೇವರು ಕೂಡ ಸುಖ ಕೊಟ್ರೆ ನೋವು ಗೊತ್ತಾಗಲ್ಲ, ನೋವು ಕೊಟ್ರೆ ಸುಖ ಗೊತ್ತಾಗಲ್ಲ ಅಂತ ನಂಗೆ ನೋವೇ ಕೊಟ್ಬಿಟ್ರು ಎಂದು ಸ್ಟೇಟಸ್ನಲ್ಲಿ ಆತ ಬರೆದಿಕೊಂಡಿದ್ದಾನೆ.