ಸುಳ್ಯ: ದೊಡ್ಡ ದೊಡ್ಡ ನಗರಗಳಲ್ಲಿ ಮಾತ್ರ ಕೇಳಿ ಬರುತ್ತಿದ್ದ ವಿಡಿಯೋ ಕಾಲ್ ಟ್ರ್ಯಾಪ್ ಪ್ರಕರಣಗಳು ಇದೀಗ ಹಳ್ಳಿಗಳಲ್ಲೂ ಬೆಳಕಿಗೆ ಬರುತ್ತಿದೆ. ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಯುವಕನೊಬ್ಬನದ್ದು ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಯುವತಿಯ ಮಾತಿಗೆ ಮರುಳಾಗಿ ವಿಡಿಯೋ ಕಾಲ್ನಲ್ಲಿ ಬಟ್ಟೆ ಬಿಚ್ಚಿದ್ದ ಯುವಕನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಯುವಕನಿಗೆ ರಾತ್ರಿ ವೇಳೆ ಯುವತಿಯೊಬ್ಬಳು ನಗ್ನವಾಗಿ ವಿಡಿಯೋ ಕಾಲ್ ಮಾಡಿದ್ದು, ಕೊನೆಯ ಕ್ಷಣದಲ್ಲಿ ಈ ಕಡೆಯಿಂದ ಯುವಕನೂ ಬಟ್ಟೆ ಬಿಚ್ಚಿದ್ದಾನೆ. ರಾತ್ರಿ ಹೊತ್ತು ನಡೆದ ಈ ಸಂಭಾಷಣೆಯ ವಿಡಿಯೋ ತುಣುಕು ಇದಾಗಿದೆ.
ಈ ಬಗ್ಗೆ ಈಟಿವಿ ಭಾರತದ ಜೊತೆಗೆ ಮಾತನಾಡಿದ ಕಡಬ ಪೊಲೀಸ್ ಠಾಣಾಧಿಕಾರಿ ರುಕ್ಮ ನಾಯ್ಕ್, ಯಾವುದೇ ಕಾರಣಕ್ಕೂ ಪರಿಚಯವಿಲ್ಲದ ಫೋನ್ ನಂಬರ್ಗಳಿಂದ ಬರುವ ಕರೆಗಳಲ್ಲಿ ನಿಮಗೆ ಪರಿಚಯವಿಲ್ಲದ ವ್ಯಕ್ತಿಗಳು ಆಗಿದ್ದಲ್ಲಿ ದಯಮಾಡಿ ಅಂತಹ ಕರೆಗಳನ್ನು ಸ್ವೀಕರಿಸಬೇಡಿ.
ಅಂಥವರೊಂದಿಗೆ ನಿಮ್ಮ ಬ್ಯಾಂಕ್ ಖಾತೆ ಮಾಹಿತಿ ಸೇರಿ ಖಾಸಗಿ ವಿಚಾರ ಹಾಗೂ ಗೌಪ್ಯ ಮಾಹಿತಿ ಹಂಚಿಕೊಳ್ಳಬೇಡಿ ಎಂದು ತಿಳಿಸಿದ್ದಾರೆ. ಅಲ್ಲದೇ, ಯಾವುದೇ ಕಾರಣಕ್ಕೂ ಪರಿಚಯ ಇಲ್ಲದ ವ್ಯಕ್ತಿಗಳ ಜೊತೆಗೆ ವಿಡಿಯೋ ಚಾಟಿಂಗ್ ಮಾಡಲೇಬೇಡಿ.
ಎಲ್ಲಕ್ಕಿಂತ ಮಿಗಿಲಾಗಿ ಇಂತಹ ವಿಡಿಯೋಗಳನ್ನು ದಯಮಾಡಿ ಇತರರಿಗೆ ಪರಸ್ಪರ ವಿನಿಮಯ ಮಾಡಿಕೊಳ್ಳಬಾರದು. ಇದು ಕಾನೂನು ಬಾಹಿರ ಚಟುವಟಿಕೆ ಆಗಿರುವುದರಿಂದ ಶಿಕ್ಷಾರ್ಹ ಅಪರಾಧವಾಗಿದೆ. ಇಂತಹ ಘಟನೆಗಳ ಬಗ್ಗೆ ಎಚ್ಚರಿಕೆ ವಹಿಸಿ ಎಂದು ಹೇಳಿದ್ದಾರೆ.
ಇದನ್ನೂ ಓದಿ: ನಮ್ಮಲ್ಲಿ ಗುಡ್ಡಗಾಡು ಪ್ರದೇಶಗಳು ಹೆಚ್ಚು, ಅಂತಹ ಸ್ಥಳಕ್ಕೆ ಕಪಲ್ಸ್ ಹೋಗಬಾರದು: ಸಚಿವ ಆನಂದ್ ಸಿಂಗ್