ನೆಲ್ಯಾಡಿ(ದಕ್ಷಿಣ ಕನ್ನಡ): ಗದಗ ಮೂಲದ ಅನ್ಯ ಕೋಮಿನ ಯುವಕ ಮತ್ತು ಆತನ ಗೆಳತಿ ಶನಿವಾರ ಧರ್ಮಸ್ಥಳಕ್ಕೆ ಹೋಗಿದ್ದು, ಅಲ್ಲಿ ಅವರು ದೇವರ ದರ್ಶನ ಪಡೆದು ನಂತರ ವಸತಿ ಹುಡುಕಲು ಮುಂದಾಗಿದ್ದಾರೆ. ಈ ವೇಳೆ ಹಿಂದೂ ಕಾರ್ಯಕರ್ತರು ಇವರನ್ನು ತಡೆದು ಪೊಲೀಸರಿಗೊಪ್ಪಿಸಿದ್ದಾರೆ.
ಧರ್ಮಸ್ಥಳದಲ್ಲಿ ವಸತಿ ಸಿಗದ ಹಿನ್ನೆಲೆಯಲ್ಲಿ ಇವರು ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದರು. ಆ ವೇಳೆ ಅನ್ಯ ಸಮುದಾಯಕ್ಕೆ ಸೇರಿದ ಯುವಕನನ್ನು ಮತ್ತು ಆತನ ಗೆಳತಿಯನ್ನು ತಡೆದ ಹಿಂದೂ ಕಾರ್ಯಕರ್ತರು ಪೊಲೀಸರಿಗೆ ಒಪ್ಪಿಸಿದ್ದಾರೆ.
ಬೇರೆ ಬೇರೆ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕೆ ಧರ್ಮಸ್ಥಳದಲ್ಲಿ ಲಾಡ್ಜ್ ಮ್ಯಾನೇಜರ್ ಇವರಿಗೆ ವಸತಿ ನೀಡಲು ನಿರಾಕರಿಸಿದ್ದರು. ಅಲ್ಲೇ ಇತರ ಸ್ಥಳಗಳಲ್ಲಿ ಅವರು ರೂಮ್ ಪಡೆಯಲು ಪ್ರಯತ್ನಿಸಿದರೂ ರೂಮ್ ಸಿಗದೇ ವಿಫಲರಾಗಿ ಸುಬ್ರಹ್ಮಣ್ಯಕ್ಕೆ ತೆರಳುವ ಪ್ರಯತ್ನ ಮಾಡಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಹಿಂದೂ ಕಾರ್ಯಕರ್ತರು ಧರ್ಮಸ್ಥಳದ ಸಮೀಪದ ಕಾಪಿನಬಾಗಿಲು ಎಂಬಲ್ಲಿ ಇವರನ್ನು ತಡೆದು ನೆಲ್ಯಾಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಪೊಲೀಸರು ಯುವತಿಯ ಕುಟುಂಬ ಸದಸ್ಯರನ್ನು ಸಂಪರ್ಕಿಸಿ ಯುವತಿಯನ್ನು ಅವರೊಂದಿಗೆ ಕಳುಹಿಸಿ ನಂತರ ಯುವಕನ ಬಳಿ ಮುಚ್ಚಳಿಕೆ ಬರೆಸಿಕೊಂಡು ಕಳುಹಿಸಿಕೊಟ್ಟಿದ್ದಾರೆ ಎನ್ನಲಾಗ್ತಿದೆ. ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ.
ಇದನ್ನೂ ಓದಿ: ರಾಷ್ಟ್ರಧ್ವಜದ ಮೇಲೆ ಜೀಸಸ್ : ಬಳ್ಳಾರಿಯಲ್ಲಿ ಆರೋಪಿ ಬಂಧಿಸಿದ ಪೊಲೀಸರು