ಪುತ್ತೂರು : ಯಕ್ಷಗಾನದ ಖ್ಯಾತ ಪುಂಡುವೇಷಧಾರಿ, ಸಿಡಿಲಮರಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬನ್ನೂರು ಯಕ್ಷದೇಗುಲ ನಿವಾಸಿ ಡಾ. ಶ್ರೀಧರ್ ಭಂಡಾರಿ (73) ಅವರು ಇಂದು ಮುಂಜಾನೆ ನಿಧನರಾಗಿದ್ದಾರೆ.
ಯಕ್ಷಗಾನ ಕಲಾ ಸಾಧಕ ಬನ್ನೂರು ದಿ.ಶೀನಪ್ಪ ಭಂಡಾರಿ ಮತ್ತು ಸುಂದರಿ ದಂಪತಿಯ ಪುತ್ರರಾಗಿರುವ ಶ್ರೀಧರ ಭಂಡಾರಿ ಅವರು ತನ್ನ 9ನೇ ವಯಸ್ಸಿನಲ್ಲೇ ಯಕ್ಷಗಾನ ಕಲಾ ಕ್ಷೇತ್ರದಲ್ಲಿ ಧ್ರುವ ನಕ್ಷತ್ರವಾಗಿ ಬೆಳಗಿ ಹೆಜ್ಜೆಗಾರಿಕೆ, ದಿಗಿಣ, ನಾಟ್ಯ, ಮಾತುಗಾರಿಕೆ, ಪಾತ್ರ ನಿರ್ವಹಣಾ ಶೈಲಿಗಳನ್ನು ಆಳವಾಗಿ ಅಭ್ಯಸಿಸಿ ಸವ್ಯಸಾಚಿಯಾಗಿ ಬೆಳೆದಿದ್ದಾರೆ.
ಇವರು ತಮ್ಮ 62ನೇ ವಯಸ್ಸಿನಲ್ಲಿ ಝೀ ನೆಟ್‌ವರ್ಕ್ ದೂರದರ್ಶನ ವಾಹಿನಿಯಲ್ಲಿ ‘ಶಹಭಾಸ್ ಇಂಡಿಯಾ’ ಕಾರ್ಯಕ್ರಮದಲ್ಲಿ 3 ನಿಮಿಷದಲ್ಲಿ 148 ಗಿರಕಿಗಳನ್ನು ಹೊಡೆದು ದಾಖಲೆ ಮಾಡಿದ್ದರು.
ಹಲವಾರು ಮಂದಿಗೆ ಯಕ್ಷಗಾನ ಕಲಾ ಶಿಕ್ಷಣ ನೀಡಿದ್ದರು. ಮೃತರು ಪತ್ನಿ ಉಷಾ ಭಂಡಾರಿ, ಪುತ್ರಿಯರಾದ ಕೋಕಿಲ, ಶಾಂತಲಾ, ಡಾ. ಅನಿಲ, ಪುತ್ರ ದೇವಿ ಪ್ರಕಾಶ್, ಮೊಮ್ಮಕ್ಕಳನ್ನು ಅಗಲಿದ್ದಾರೆ.