ಪುತ್ತೂರು: ಶಿಕ್ಷಕರ ತಂಡವೊಂದು ವರ್ಲಿ ಕಲೆಯ ಮೂಲಕ ಪುತ್ತೂರು ಉಪವಿಭಾಗಾಧಿಯವರ ಕಚೇರಿಯ ಸೌಂದರ್ಯವನ್ನು ಇಮ್ಮಡಿಗೊಳಿಸುವ ಕಾಯಕ ನಡೆಸುತ್ತಿದೆ.
ಪುತ್ತೂರು ಉಪವಿಭಾಗಾಧಿಯವರ ಕಚೇರಿ ಸದಾ ಜನಜಂಗುಳಿಯಿಂದಿರುತ್ತದೆ. ಈ ನಿಟ್ಟಿನಲ್ಲಿ ಜನತೆಗೆ ಇಲಾಖೆಯ ಮಾಹಿತಿಯನ್ನು ತಿಳಿಸಲು ವರ್ಲಿ ಕಲೆಯ ಮೊರೆ ಹೋಗುವ ಚಿಂತನೆ ಅಧಿಕಾರಿ ವರ್ಗದ್ದಾಗಿದೆ. ಇದಕ್ಕೆ ಪೂರಕವಾಗಿ ಪುತ್ತೂರು ಎಸಿ ಕಚೇರಿ ಗೋಡೆಗಳ ಮೇಲೆ ವರ್ಲಿ ಕಲೆ ಅರಳುತ್ತಿದೆ.
ತುಳುನಾಡಿನ ಕಂಬಳ, ಯಕ್ಷಗಾನ, ಆಟಿ ಕಳಂಜ ಸೇರಿದಂತೆ ತುಳು ಸಂಸ್ಕೃತಿಯನ್ನು ಗೋಡೆಗಳ ಮೇಲೆ ಕೆತ್ತುವ ಕಾಯಕ ಈಗಾಗಲೇ ಆರಂಭಗೊಂಡಿದೆ. ಸುಮಾರು 5 ದಿನಗಳ ಕಾಲ 10 ಶಿಕ್ಷಕರ ತಂಡ ಈ ಕಾಯಕಕ್ಕೆ ಮುಂದಾಗಿದೆ. ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ವಿವಿಧ ಸೌಲಭ್ಯಗಳ ಕುರಿತು ಈ ವರ್ಲಿ ಕಲೆಯ ಮೂಲಕ ತಿಳಿಸಿಕೊಡುವ ಪ್ರಯತ್ನ ಈ ಶಿಕ್ಷಕರದ್ದಾಗಿದೆ.
10 ಶಿಕ್ಷಕರನ್ನೊಳಗೊಂಡ ತಂಡ:
ಪುತ್ತೂರಿನ 10 ಮಂದಿ ಪ್ರತಿಭಾನ್ವಿತ ಕಲಾ ಶಿಕ್ಷಕರ ಈ ತಂಡದಲ್ಲಿ ಕಲಾ ಶಿಕ್ಷಕ ತಾರನಾಥ್ ಕೈರಂಗಳ ವಿಟ್ಲ ಅವರ ವಿನ್ಯಾಸದಲ್ಲಿ ಕಲಾ ಶಿಕ್ಷಕ ಶ್ರೀಕಾಂತ್ ನಾಯಕ್ ಕಂಬಳಕೋಡಿ ಅವರ ನೇತೃತ್ವದಲ್ಲಿ ವರ್ಲಿ ಕಲೆಯನ್ನು ಮೂಡಿಸುವ ಕೆಲಸ ನಡೆಯುತ್ತಿದೆ. ಇವರೊಂದಿಗೆ ಸುಭೋದ ಪ್ರೌಢ ಶಾಲೆಯ ಕಲಾ ಶಿಕ್ಷಕಿ ಶಾರದಾ, ಸಾಲ್ಮರ ಪ್ರೌಢಶಾಲಾ ಕಲಾ ಶಿಕ್ಷಕಿ ಜಯಲಕ್ಷಿ, ಕೊಂಬೆಟ್ಟು ಕಲಾ ಶಿಕ್ಷಕ ಜಗನ್ನಾಥ್ ಅರಿಯಡ್ಕ, ಕೆಪಿಎಸ್ ಕುಂಬ್ರದ ಕಲಾಶಿಕ್ಷಕ ಪ್ರಕಾಶ್ ವಿಟ್ಲ, ಕೆಪಿಎಸ್ ಕೆಯ್ಯೂರು ಕಲಾಶಿಕ್ಷಕ ಎನ್.ಎಚ್. ಗೌಂಡಿ, ಸಾಂದೀಪನಿ ನರಿಮೊಗ್ರು ಕಲಾ ಶಿಕ್ಷಕ ಸುಚೇತ್, ಮುಕ್ವೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ಚರಣ್ ಕುಮಾರ್, ಕೇಶವ ಮೊಟ್ಟೆತ್ತಡ್ಕ ಅವರು ಈ ವರ್ಲಿ ಜಗತ್ತಿನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಸೌಂದರ್ಯದೊಂದಿಗೆ ಮಾಹಿತಿ:
ಪುತ್ತೂರು ಎಸಿ ಕಚೇರಿಗೆ ದಿನಕ್ಕೆ ನೂರಾರು ಮಂದಿ ಬರುತ್ತಾರೆ. ಹೀಗೆ ಬಂದವರು ತಮ್ಮ ಸರದಿಗಾಗಿ ಕಾಯುತ್ತಾರೆ. ಈ ಸಂದರ್ಭದಲ್ಲಿ ಗೋಡೆಗಳಲ್ಲಿ ಚಿತ್ರಿತವಾಗಿರುವ ಕಲೆ ಹಾಗೂ ಅದರಲ್ಲಿರುವ ಮಾಹಿತಿಯನ್ನು ಗಮನಿಸುತ್ತಾರೆ. ಇದರಿಂದ ಸರ್ಕಾರಿ ಸೌಲಭ್ಯಗಳ ಮಾಹಿತಿಯೂ ಜನತೆಗೆ ದೊರೆಯುತ್ತದೆ. ಇದರೊಂದಿಗೆ ಎಸಿ ಕಚೇರಿಯ ಗೋಡೆ ಸೌಂದರ್ಯವೂ ಹೆಚ್ಚಿ ಇದನ್ನು ವೀಕ್ಷಿಸುವ ಪುತ್ತೂರು ಮಂದಿಗೆ ಮುದ ನೀಡುತ್ತದೆ.
ಇದನ್ನೂ ಓದಿ: ಸರಳ ಯುಗಾದಿ ಆಚರಣೆ : ಶಿವಮೊಗ್ಗದಲ್ಲಿಲ್ಲ ಖರೀದಿ ಭರಾಟೆ
ಈ ನಿಟ್ಟಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸಿ. ಲೋಕೇಶ್ ಸಹಕಾರದೊಂದಿಗೆ ವರ್ಲಿ ಕಲೆಯನ್ನು ಮೂಡಿಸುವ ಕೆಲಸಕ್ಕೆ ಮುಂದಾಗಿದ್ದೇವೆ ಅಂತಾರೆ ಉಪವಿಭಾಗಾಧಿಕಾರಿ ಡಾ. ಯತೀಶ್ ಉಳ್ಳಾಲ್.