ಭಟ್ಕಳ: ತಾಲೂಕಿನ ತುಂಬು ಗರ್ಭಿಣಿಯೋರ್ವರಿಗೆ ಶುಕ್ರವಾರ ಮಧ್ಯಾಹ್ನ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಬಳಿಕ ಅವರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಆಸ್ಪತ್ರೆಯ ಆವರಣದಲ್ಲಿಯೇ ಆಟೋದಲ್ಲಿ ಹೆರಿಗೆಯಾಗಿದೆ.
ಹೆರಿಗೆಯಾದ ಮಹಿಳೆ ರಜ್ಮಿಯಾ, ಜಾಮೀಯಾಬಾದ್ ನಿವಾಸಿ ಎಂದು ತಿಳಿದು ಬಂದಿದೆ. ಈ ಮಹಿಳೆಗೆ ಮಧ್ಯಾಹ್ನ 12 ಗಂಟೆ ಸುಮಾರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ತಕ್ಷಣ 108 ಆ್ಯಂಬುಲೆನ್ಸ್ಗೆ ಕರೆ ಮಾಡಲಾಗಿದೆ. ಆದ್ರೆ ಮಧ್ಯಾಹ್ನ 3 ಗಂಟೆಯಾದರೂ ಆ್ಯಂಬುಲೆನ್ಸ್ ಬಾರದೇ ಇದ್ದ ಕಾರಣ ಹೊಟ್ಟೆನೋವು ಹೆಚ್ಚಾಗಿದ್ದರಿಂದ ಪತಿಯೇ ರಸ್ತೆಗೆ ಎತ್ತಿಕೊಂಡು ಬಂದು, ಆಟೋಗೆ ಕರೆ ಮಾಡಿದ್ದಾರೆ. ಆದ್ರೆ ಆಟೋದವರು ತಮ್ಮ ಬಳಿ ಪಾಸ್ ಇಲ್ಲವೆಂದು ಹೇಳಿ ಬರಲು ನಿರಾಕರಿಸಿದ್ದಾರೆ.
ನಂತರ ಅಲ್ಲಿನ ಸ್ಥಳೀಯ ಆಟೋ ಚಾಲಕನ ಸಹಾಯದಿಂದ ಶಿರಾಲಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದ್ರೆ ಆಸ್ಪತ್ರೆಯ ಆವರಣದಲ್ಲಿ ಆಟೋದಲ್ಲೇ ಮಹಿಳೆಗೆ ಹೆಣ್ಣುಮಗು ಜನಿಸಿದೆ. ಈ ಮಹಿಳೆಗೆ ಇದು ಮೂರನೇ ಹೆರಿಗೆ ಎಂದು ತಿಳಿದು ಬಂದಿದ್ದು, ಸದ್ಯ ತಾಯಿ-ಮಗು ಇಬ್ಬರು ಶಿರಾಲಿ ಸರ್ಕಾರಿ ಆಸ್ಪತ್ರೆಯಲ್ಲಿ ಆರೋಗ್ಯವಾಗಿದ್ದಾರೆ.
ತುರ್ತಾಗಿ ಆ್ಯಂಬುಲೆನ್ಸ್ ಸಿಗದೇ ಸಮಸ್ಯೆ:
ಸದ್ಯ ಭಟ್ಕಳದಲ್ಲಿನ 108 ಆ್ಯಂಬುಲೆನ್ಸ್ಅನ್ನು ಕೊರೊನಾ ರೋಗಿಗಳ ಸಾಗಾಟಕ್ಕೆ ಬಳಸಲಾಗುತ್ತಿದ್ದು, ಇದರಿಂದ ಹೆರಿಗೆ ಸೇರಿ ತುರ್ತು ಆರೋಗ್ಯ ಸಮಸ್ಯೆಗೆ 108 ಆ್ಯಂಬುಲೆನ್ಸ್ ಸಿಗುತ್ತಿಲ್ಲ. ತಾಲೂಕಾಡಳಿತ ಇಂತಹ ತುರ್ತು ಸಂದರ್ಭಗಳಲ್ಲಿ ಆ್ಯಂಬುಲೆನ್ಸ್ ಸಿಗುವಂತೆ ವ್ಯವಸ್ಥೆ ಮಾಡಬೇಕು ಎಂಬುದು ಮಹಿಳೆ ಕುಟುಂಬದವರ ಮನವಿಯಾಗಿದೆ.