ಮಂಗಳೂರು: ಅರಣ್ಯ ಇಲಾಖೆಗೆ ಸೆರೆಸಿಕ್ಕಿದ್ದ ಕಾಡುಕೋಣ ಸಾವಿಗೀಡಾಗಿದ್ದ ಬೆನ್ನಿಗೇ ನನಗರದಲ್ಲಿ ಮತ್ತೊಂದು ಕಾಡುಕೋಣ ಕಾಣಸಿಕ್ಕಿದೆ.
ಮಂಗಳವಾರ ಕಾಡುಕೋಣವೊಂದು ಮಣ್ಣಗುಡ್ಡದ ಹ್ಯಾಟ್ ಹಿಲ್ ಸಮೀಪ ಅರಣ್ಯ ಇಲಾಖೆ ಸೆರೆ ಹಿಡಿದು ಬಳಿಕ ಅದು ಮೃತಪಟ್ಟಿತ್ತು. ಇದೀಗ ಅದರ ಬೆನ್ನಲ್ಲೇ ನಿನ್ನೆ ಮತ್ತೊಂದು ಕಾಡುಕೋಣ ಕೂಳೂರು ಫಲ್ಗುಣಿ ನದಿಯ ಬಳಿ ಕಾಣಸಿಕ್ಕಿದೆ. ಮೊದಲ ಕಾಡುಕೋಣ ಕಂಡ ದಿನವೇ ಮತ್ತೊಂದು ಕಾಡುಕೋಣ ಇದೆ ಎಂಬ ಸುದ್ದಿ ಹಬ್ಬಿತ್ತು. ಆ ಬಳಿಕ ನಗರದ ಅಶೋಕನಗರ, ಕೋಡಿಕಲ್ ನಲ್ಲಿ ಕಾಣಸಿಕ್ಕಿದೆ ಎಂಬ ಸುದ್ದಿಯೂ ಹಬ್ಬಿತ್ತು. ನಿನ್ನೆ ಸಂಜೆ ಕೂಳೂರಿನ ಫಲ್ಗುಣಿ ನದಿಯಲ್ಲಿ ತೇಲಿಕೊಂಡು ಬಂದಿರುವ ಈ ಕಾಡುಕೋಣ ಅಲ್ಲೇ ಸಮೀಪ ಅಡ್ಡಾಡುತ್ತಿತ್ತು. ಇದನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಗಮನಿಸಿ, ಕಾಡುಕೋಣವನ್ನು ಮರಳಿ ಕಾಡಿಗೆ ಕಳಿಸುವ ಪ್ರಯತ್ನ ಮಾಡಿದ್ದಾರೆ.
ಈ ಸಂದರ್ಭ ನದಿಯ ಬದಿಯಲ್ಲಿಯಲ್ಲಿರುವ ಕುರುಚಲು ಗಿಡಗಳ ಪೊದೆಯಿಂದ ಮೇಲೆ ಬಂದು ರಸ್ತೆಗೆ ಬರಲು ಪ್ರಯತ್ನಿಸಿದ ಕಾಡುಕೋಣ, ವಾಹನಗಳ ಓಡಾಟ ಕಂಡು ಬೆದರಿ ಮತ್ತೆ ಅದೇ ಪೊದೆಯೊಳಗೆ ಹೋಗಿರುವ ವಿಡಿಯೋ ಒಂದು ವೈರಲ್ ಆಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಏಳು ಪ್ರತ್ಯೇಕ ತಂಡ ರಚಿಸಿ ರಾತ್ರಿಯೆಲ್ಲಾ ಕಾರ್ಯಾಚರಣೆ ನಡೆಸಿದೆ. ಪಿಲಿಕುಳದ ವೈದ್ಯರಿದ್ದರೂ ಮುಂಜಾಗ್ರತಾ ಕ್ರಮವಾಗಿ ಶಿವಮೊಗ್ಗ ಸಕ್ರೆಬೈಲ್ ನ ಪಶುವೈದ್ಯರನ್ನು ಕರೆಸಲಾಗಿದೆ. ಆದರೆ ಈವರೆಗೆ ಕಾಡುಕೋಣ ಸೆರೆಹಿಡಿಯಲಾಗಿಲ್ಲ.