ಸುಳ್ಯ (ದಕ್ಷಿಣ ಕನ್ನಡ): ಕಳೆದ ಹಲವು ವರ್ಷಗಳಿಂದ ಆಗಮಿಸುವ ಒಂಟಿ ಸಲಗ ಈ ವರ್ಷವೂ ತನ್ನ ಸಂಚಾರ ಪ್ರಾರಂಭಿಸಿತ್ತು. ಇದೀಗ ಆನೆ ತನ್ನ ವಾಪಸ್ ಸಂಚಾರ ಆರಂಭಿಸಿದೆ. ಪ್ರತಿ ವರ್ಷ ಕುಂದಾಪುರ ಭಾಗದಿಂದ ಬಂದು ಸುಳ್ಯ ಮೂಲಕ ಮಡಿಕೇರಿಯ ಭಾಗಮಂಡಲದವರೆಗೂ ಸಂಚರಿಸುತ್ತದೆ ಎನ್ನಲಾಗುತ್ತಿರುವ ಈ ಕಾಡಾನೆ ಒಂದು ತಿಂಗಳ ಹಿಂದೆ ಶಿರಾಡಿ ಪ್ರದೇಶದಲ್ಲಿ ಕಾಣಿಸುತ್ತಿತ್ತು. ಅರಣ್ಯ ಇಲಾಖೆಯ ಮಾಹಿತಿ ಪ್ರಕಾರ ಪ್ರಸ್ತುತ ಈ ಕಾಡಾನೆ ತನ್ನ ಈ ವರ್ಷದ ಸಂಚಾರ ಪೂರ್ಣಗೊಳಿಸಿ, ತಾನು ಬಂದ ದಾರಿಯಲ್ಲೇ ವಾಪಸ್ ಸಾಗುತ್ತಿದೆ.
ಚಾರ್ಮಾಡಿ ಘಾಟಿ ಮೂಲಕ ಕುಂದಾಪುರಕ್ಕೆ: ಪಂಜ ವಲಯದ ಅರಣ್ಯ ಅಧಿಕಾರಿಗಳು ಮಾಹಿತಿ ನೀಡಿ, "ಸುಳ್ಯ ತಾಲೂಕಿನ ಪಂಬೆತ್ತಾಡಿ, ಪಂಜ ಭಾಗದಲ್ಲಿ ಬುಧವಾರ ರಾತ್ರಿ ಕಾಡಾನೆ ಸಂಚರಿಸಿ ಆ ಬಳಿಕ ಪುಳಿಕುಕ್ಕು ಕಡೆಯಲ್ಲಿ ಹಾಗೂ ಗಾಳಿಬೀಡು ಅರಣ್ಯ ಪ್ರದೇಶ ಕಾಣಿಸಿಕೊಂಡಿದೆ. ನಿನ್ನೆ ರಾತ್ರಿ ಕಡಬ ಸಮೀಪದ ಕೋಡಿಂಬಾಳ ಮೂಲಕ ಸಂಚರಿಸಿದ ಕಾಡಾನೆ ಇಲ್ಲಿನ ರೈಲ್ವೆ ಹಳಿ ದಾಟಿ ಮರ್ದಾಳ ಸಮೀಪದ ನೆಕ್ಕಿತ್ತಡ್ಕ ಮೂಲಕ ಕೊಣಾಜೆ ಕಾಡಿಗೆ ಪ್ರವೇಶ ಮಾಡಿದೆ. ಬೆಳಗಿನ ಜಾವ ಮೂರು ಗಂಟೆಗಳ ಸುಮಾರಿಗೆ ನೂಜಿಬಾಳ್ತಿಲ ಸಮೀಪದ ತಲೇಕಿ ದೇವಸ್ಥಾನದ ಹತ್ತಿರ ಕಾಡಾನೆ ನೋಡಿದ್ದಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಮುಂದಕ್ಕೆ ಈ ಆನೆ ತನ್ನ ವಾಡಿಕೆಯಂತೇ ಉದನೆ ಅಥವಾ ಶಿರಾಡಿ ಕಾಡು ಪ್ರವೇಶಿಸಿ ಶಿಶಿಲ, ಚಾರ್ಮಾಡಿ ಘಾಟಿ ಮೂಲಕ ಕುಂದಾಪುರ ಕಡೆಗೆ ಹೋಗುತ್ತದೆ" ಎಂದು ತಿಳಿಸಿದ್ದಾರೆ.
ಗುಂಡು ಹೊಡೆದಿದ್ದಾರೆ ಎಂಬ ವದಂತಿ: ಕಾಡಾನೆ ಪಂಜ ಭಾಗದಲ್ಲಿ ಸಂಚರಿಸುವಾಗ ಅದಕ್ಕೆ ಗುಂಡು ಹೊಡೆಯಲಾಗಿದೆ ಎಂಬ ಸುದ್ದಿ ಹಬ್ಬಿತ್ತು. ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪಂಜ ವಲಯ ಅರಣ್ಯ ಅಧಿಕಾರಿಗಳು, "ಆನೆಗೆ ಗುಂಡು ಹೊಡೆದಿದ್ದಾರೆ ಎನ್ನುವ ಸುದ್ದಿ ಸುಳ್ಳಾಗಿರಬಹುದು. ಗುಂಡು ತಾಗಿದ್ದೇ ಆದಲ್ಲಿ ಆನೆ ವಿಕೋಪಕ್ಕೆ ತಿರುಗಿ ಜನ ಅಥವಾ ಜಾನುವಾರು ಹಾಗೂ ಆಸ್ತಿಪಾಸ್ತಿಗಳಿಗೆ ತೊಂದರೆ ಮಾಡುತ್ತಿತ್ತು ಅಥವಾ ಗಾಯವಾದಲ್ಲಿ ಎಲ್ಲಾದರೂ ವಿಶ್ರಾಂತಿ ಪಡೆಯಬೇಕಿತ್ತು. ಆದರೆ ಆನೆ ತನ್ನ ಪಾಡಿಗೆ ತಾನು ಹೋಗುತ್ತಿದೆ. ಆದರೂ ಆನೆಯ ಮೇಲೆ ನಿಗಾ ಇಡಲಾಗಿದೆ" ಎಂದು ಹೇಳಿದರು.
ಸಾಮಾಜಿಕ ಜಾಲತಾಣದಲ್ಲಿ ಜಾಗೃತಿ: ಒಂಟಿ ಕಾಡಾನೆ ಸ್ಥಳೀಯರ ಮನೆ ಸಮೀಪ, ರಸ್ತೆಯಲ್ಲಿ ಸಂಚರಿಸುತ್ತಿರುವ ಬಗ್ಗೆ ಮಾಹಿತಿ ಪಡೆಯುವ ಜನರು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಜನರು ಎಚ್ಚರಿಕೆ ವಹಿಸುವಂತೆ ಹಾಗೂ ವಾಹನ ಸಂಚಾರಿಗಳು, ರಾತ್ರಿ ರಬ್ಬರ್ ಟ್ಯಾಪಿಂಗ್ ಮಾಡುವವರಿಗೆ ತಿಳಿಸುವ ಕೆಲಸವನ್ನು ಮಾಡುತ್ತಿದ್ದರು.
ಅರಣ್ಯ ಅಧಿಕಾರಿಗಳ ಮನವಿ: "ಕಾಡಾನೆ ಸಂಚರಿಸುವ ವೇಳೆ ಪಟಾಕಿ ಸಿಡಿಸಿ, ಗುಂಡು ಹಾರಿಸಿ ಯಾರೂ ಅದಕ್ಕೆ ತೊಂದರೆ ನೀಡಬೇಡಿ. ಅದರ ಪಾಡಿಗೆ ಕಾಡಿಗೆ ತೆರಳುತ್ತದೆ. ಆದರೂ ರಾತ್ರಿ ವೇಳೆ ಸಂಚರಿಸುವವರು, ಕೃಷಿಕರು, ಟ್ಯಾಪಿಂಗ್ ಕೆಲಸಗಾರು ತುಂಬಾ ಎಚ್ಚರಿಕೆ ವಹಿಸಬೇಕು. ಯಾವುದಾದರೂ ಅನಾಹುತಗಳು ಆದಲ್ಲಿ ಕೂಡಲೇ ಅರಣ್ಯ ಇಲಾಖೆಯನ್ನು ಸಂಪರ್ಕಿಸುವಂತೆ ಪಂಜ ವಲಯದ ಅರಣ್ಯ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಚಾಮರಾಜನಗರ: ಆಸನೂರು ಸಮೀಪ ಬಸ್ ಬೆನ್ನಟ್ಟಿ ಗಾಜು ಒಡೆದು ಹಾಕಿದ ಸಲಗ